ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಶ್ ತೀವ್ರ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷದ ನವೆಂಬರ್ 24 ರಂದೇ ಅವರ ಸಹೋದರ ಡಾ. ಹರೀಶ್ ನಿಧನರಾಗಿದ್ದರು. ಇದೇ ದಿನ ಅಂಬರೀಶ್ ಅವರು ಕೂಡ ಇಹಲೋಕ ತ್ಯಜಿಸಿದ್ದಾರೆ. 

ಬೆಂಗಳೂರು : ಕನ್ನಡ ಚಿತ್ರರಂಗದ ರೆಬೆಲ್‌ಸ್ಟಾರ್ ಹಾಗೂ ರಾಜಕಾರಣಿ ಅಂಬರೀಶ್ ಅನಾರೋಗ್ಯ ಸಮಸ್ಯೆಯಿಂದಾಗಿ ಶನಿವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ನಟ, ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ಅವರ ಸಹೋದರ ಡಾ.ಹರೀಶ್ ( 69) ಅವರು ವರ್ಷದ ಹಿಂದೆ ಇದೇ ದಿನದಂದು (2017 ರ ನ. 24) ನಿಧನರಾಗಿದ್ದರು. 

1948ರಲ್ಲಿ ಜನಿಸಿದ್ದ ಡಾ.ಹರೀಶ್ 35 ವರ್ಷಗಳಿಂದ ದೊಡ್ಡರಸಿನಕೆರೆ ಸಮೀಪದ ಕೆ.ಎಂ.ದೊಡ್ಡಿಯಲ್ಲಿ ತಮ್ಮದೇ ಸ್ವಂತ ಕ್ಲಿನಿಕ್ ಹೊಂದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು 2017 ರ ನವೆಂಬರ್ 24 ರಂದು ಮೈಸೂರಿನ ನಿವಾಸದಲ್ಲಿ ಮೃತಪಟ್ಟಿದ್ದರು.

ಇದೀಗ ಸಹೋದರ ನಿಧನದಂದೇ ಅಂಬಿಯೂ ಕೂಡ ಇಹಲೋಕ ತ್ಯಜಿಸಿದ್ದಾರೆ. ಶನಿವಾರ ಸಂಜೆ ಅವರಿಗೆ ಏಕಾಏಕಿ ಎದೆನೋವು ಹಾಗೂ ಉಸಿರಾಟದ ತೀವ್ರ ಸಮಸ್ಯೆ ಕಾಣಿಸಿಕೊಂಡ ಕಾರಣ, ವಿಂಡ್ಸರ್ ಮ್ಯಾನರ್ ಬಳಿಯ ಫ್ಲ್ಯಾಟ್‌ನಲ್ಲಿ ನಿಂತಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ವಸಂತನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

 ತೀವ್ರ ಎದೆನೋವು, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ತೀವ್ರ ಹೃದಯಾಘಾತದಿಂದ ಸುಮಾರು 10. 15ರ ವೇಳೆಗೆ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಸಣ್ಣಮಟ್ಟದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು 2014ರಲ್ಲಿ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸಿದ್ದರು.