ಸುಖಿ ಕ್ಲಿನಿಕ್ : ವೈದ್ಯ ಡಾ.ಬಿ.ಆರ್. ಸುಹಾಸ್ ಉತ್ತರ
ನಿಮಗೂ ಅರಸಿಕತೆ ಕಾಡಿತೇ?
1. ನನಗೆ 56 ವರ್ಷ. ಸುಂದರ ಪತ್ನಿ, 23 ವರ್ಷದ ಮಗಳು ಇದ್ದಾರೆ. ನನ್ನ ಸಮಸ್ಯೆಯೇನೆಂದರೆ, ನನಗೆ ವಿಪರೀತ ಲೈಂಗಿಕ ಆಸಕ್ತಿ. ಪತ್ನಿಗೆ ಮೊದಲಿನಿಂದಲೂ ಇದರಲ್ಲಿ ಆಸಕ್ತಿಯಿಲ್ಲ. ಮದುವೆ ಆದಾಗಿನಿಂದ ನಾನು ಬಹುತೇಕ ಹಸ್ತಮೈಥುನದಿಂದಲೇ ತೃಪ್ತಿಪಟ್ಟುಕೊಳ್ಳುತ್ತಿದ್ದೇನೆ. ಸುಂದರಿಯರನ್ನು ಕಂಡಕೂಡಲೇ ಉದ್ರೇಕಗೊಳ್ಳುತ್ತೇನೆ. ಸ್ನೇಹಿತನ ಪತ್ನಿಯನ್ನು ಹೀಗೆ ನೆನೆದು ಕನಸಿನಲ್ಲಿ ಕನವರಿಸುವಾಗ, ಪತ್ನಿಗೆ ತಿಳಿದು ನಿಂದಿಸಿಕೊಂಡೆ. ಸಾಹಿತ್ಯ ಪುಸ್ತಕ ಓದುವ ಹವ್ಯಾಸದವನು ನಾನು. ಆದರೂ ಈ ದೌರ್ಬಲ್ಯದಿಂದ ಹೊರ ಬರಲೆತ್ನಿಸಿದರೂ ಸಾಧ್ಯವಾಗುತ್ತಿಲ್ಲ. ದಯವಿಟ್ಟು ಪರಿಹಾರ ಸೂಚಿಸಿ.
-ಸುರೇಶ್ ಸ್ವಾಮಿ, ಊರುಬೇಡ
ಪತಿಗೆ ಹೆಚ್ಚಿನ ಲೈಂಗಿಕ ಆಸಕ್ತಿಯಿರುವುದು ಹಾಗೂ ಪತ್ನಿಗೆ ಕಡಿಮೆಯಿರುವುದು ಅಥವಾ ಇಲ್ಲದಿರುವುದು, ಹಾಗೆಯೇ ಪತ್ನಿಗೆ ಹೆಚ್ಚಿದ್ದು ಪತಿಗೆ ಕಡಿಮೆಯಿರುವುದು ನಿಜಕ್ಕೂ ಸಮಸ್ಯೆ. ಹಸ್ತಮೈಥುನ ಹಾಗೂ ಸುಂದರಿಯರನ್ನು ಕಲ್ಪಿಸಿಕೊಳ್ಳುವುದು ತಪ್ಪಲ್ಲವಾದರೂ ಸ್ನೇಹಿತರ ಅಥವಾ ಪರಿಚಿತರ ಪತ್ನಿಯರನ್ನು ಅದರಲ್ಲೂ ಪತ್ನಿಗೆ ತಿಳಿಯುವಂತೆ ಕಲ್ಪಿಸಿಕೊಳ್ಳುವುದು ತಪ್ಪಾಗುತ್ತದೆ. ಮುಖ್ಯ ಸಮಸ್ಯೆಯೆಂದರೆ, ಕಾಮ ಅಥವಾ ಲೈಂಗಿಕ ಆಸಕ್ತಿಯನ್ನು ತಪ್ಪೆಂದು ಕೆಲವರು ಭಾವಿಸಿರುವುದು. ಖಂಡಿತವಾಗಿಯೂ ಅದು ತಪ್ಪಲ್ಲ. ಪ್ರಕೃತಿಯ ಮೂಲಭೂತ ಅಗತ್ಯಗಳಲ್ಲಿ ಕಾಮ ಒಂದು. ಆದರೆ ಪ್ರಾಣಿಗಳಲ್ಲಿ ಅದು ಸಂತಾನೋತ್ಪತ್ತಿಗಾಗಿ ಮಾತ್ರ ವರ್ಷದ ಒಂದು ಋತುವಿನಲ್ಲಿ ಕಾಣಿಸಿಕೊಂಡರೆ, ಮನುಷ್ಯರಲ್ಲಿ ಅದು ವರ್ಷಪೂರ್ತಿ ಕಾಣಿಸಿಕೊಳ್ಳುತ್ತದೆ. ಇದನ್ನು ಎಲ್ಲ ವಿವಾಹಿತರೂ ಮನಗಂಡು ತಮ್ಮ ಸಂಗಾತಿಗಳಿಗೆ ಲೈಂಗಿಕ ಸುಖ ನೀಡಲು ಸಹಕರಿಸಬೇಕು. ಅನೇಕರು ಧಾರ್ಮಿಕ, ಸಾಮಾಜಿಕ (ಬೆಳೆದ ವಾತಾವರಣ), ವೈಯಕ್ತಿಕ (ಕಾಮದ ವಿಷಯದಲ್ಲಿ ಆದ ನೋವು, ನಿರಾಶೆ, ಅವಮಾನ ಇತ್ಯಾದಿ), ಮೊದಲಾದ ಕಾರಣಗಳಿಂದ ದೂರವಾಗುತ್ತಾರೆ. ಆದರೆ ನಮ್ಮ ಧರ್ಮ ಕಾಮಕ್ಕೆ ಅತ್ಯುನ್ನತ ಸ್ಥಾನ ಕೊಟ್ಟು ಅದನ್ನು ಒಂದು ಪುರುಷಾರ್ಥ (ಮನುಷ್ಯನು ಸಾಸಿಕೊಳ್ಳಬೇಕಾದ ಗುರಿ) ಎಂದು ಕರೆದಿರುವುದು ದುರದೃಷ್ಟವಶಾತ್ ಬಹುತೇಕರಿಗೆ ಗೊತ್ತಿಲ್ಲ! ಕಾಮಸೂತ್ರವನ್ನು ಕೊಟ್ಟಿದ್ದೂ ನಮ್ಮ ನಾಡೇ. ದೇಗುಲಗಳಲ್ಲೂ ರತಿಶಿಲ್ಪಗಳನ್ನು ತೋರಿಸಿದ್ದಾರೆ. ನಾವು ಪೂಜಿಸುವ ಅನೇಕ ದೇವರುಗಳೂ ಶೃಂಗಾರಪ್ರಿಯರೇ! ಇನ್ನು ಕೆಲವರು ಅತಿಶಿಸ್ತಿನ ವಾತಾವರಣದಲ್ಲಿ ಬೆಳೆದು ಕಾಮದ ಬಗ್ಗೆ ಅಜ್ಞಾನ, ಅರಸಿಕತೆಗಳನ್ನು ಹೊಂದಿರುತ್ತಾರೆ. ಒಟ್ಟಿನಲ್ಲಿ ಏಕೆ ಲೈಂಗಿಕಾಸಕ್ತಿ ಇಲ್ಲವೆಂದು ಸಮಾಲೋಚಿಸಬೇಕು. ನಿಮ್ಮ ಪತ್ನಿಯ ಬಳಿ ನಿಮ್ಮ ಆಸೆಯನ್ನು ತೋಡಿಕೊಳ್ಳಿ. ಅವರನ್ನು ಬಿಟ್ಟರೆ ಇದಕ್ಕೆ ಬೇರೆ ದಾರಿಯಿಲ್ಲವೆಂದು ಮನವರಿಕೆ ಮಾಡಿಕೊಡಿ. ಅವರ ಇತರ ಆಸಕ್ತಿಗಳನ್ನು ಪೂರೈಸಿ, ಪ್ರೀತಿ ತೋರಿಸಿ. ನಿಮ್ಮ ಲೈಂಗಿಕ ವಿಧಾನಗಳಲ್ಲಿ ಅವರಿಗೆ ಇಷ್ಟವಾಗದ ವಿಚಾರಗಳಿದ್ದರೆ ಮನಸ್ಸು ಬಿಚ್ಚಿ ಹೇಳಲು ಪ್ರೋತ್ಸಾಹಿಸಿ. ಸಾಧ್ಯವಾದರೆ ಇಬ್ಬರೂ ಲೈಂಗಿಕತಜ್ಞರ ಬಳಿ ಹೋಗಿ ಆಪ್ತಸಮಾಲೋಚನೆ ಮಾಡಿಸಿಕೊಳ್ಳಿ. ನಿಮ್ಮ ಕಡೆಯೇ ಅತಿಯೆನಿಸಿದರೆ ನೀವೇ ಇಷ್ಟಪಡುವ ಸಾಹಿತ್ಯ, ಅಂತೆಯೇ ಸಂಗೀತ, ಪ್ರವಾಸ ಇತ್ಯಾದಿಗಳ ಕಡೆ ಆಸಕ್ತಿಯನ್ನು ವರ್ಗಾಯಿಸಿ. ಇವೆಲ್ಲವೂ ಕಾಮ ಅಥವಾ ಬಯಕೆಯ ಬೇರೆ ಬೇರೆ ಮುಖಗಳೇ!
2. ನನಗೆ 26 ವರ್ಷ. ಬೇರೊಂದು ಧರ್ಮದ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಹೀಗೆ ಬೇರೆ ಜಾತಿ, ಧರ್ಮದವರನ್ನು ವರಿಸುವುದರಿಂದ ಹುಟ್ಟುವ ಮಕ್ಕಳು ಬುದ್ಧಿವಂತರಾಗುತ್ತಾರಂತೆ ನಿಜವೇ?
-ಹೆಸರು ಬೇಡ, ಊರುಬೇಡ
ಬೇರೆ ಜಾತಿ ಅಥವಾ ಧರ್ಮದ ಹುಡುಗಿಯನ್ನು ಮದುವೆ ಆಗುವುದರಿಂದ ಹುಟ್ಟುವ ಮಕ್ಕಳು ಬುದ್ಧಿವಂತರಾಗಿರುತ್ತಾರೆಂದೇನೂ ಇಲ್ಲ. ಆ ಹುಡುಗಿಯು ಬುದ್ಧಿವಂತಳಾಗಿದ್ದರೆ ಆಗಬಹುದಷ್ಟೇ.
(ಕೃಪೆ: ಕನ್ನಡ ಪ್ರಭ)
