ಕವಿರಾಜ ಮಾರ್ಗದ ನೆಲ ಸೇಡಂ ಸೀಮೆಯಲ್ಲಿಯೇ ಕನ್ನಡದ ಮೇಲೆ ತೆಲಗು ಭಾಷೆಯ ಸವಾರಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದನ್ನು ಜಿಲ್ಲೆಯ ತೆಲುಗನ್ನಡ ನೆಲವೆಂದೇ ಕರೆಯಲಾಗುತ್ತಿದೆ.

ಕಲಬುರಗಿ(ನ.24): ಕನ್ನಡ ಸಾಹಿತ್ಯಕ್ಕೆ ಲಾಕ್ಷಣಿಕ ಗ್ರಂಥ ಕವಿರಾಜಮಾರ್ಗ ಕೊಡುಗೆ ನೀಡಿರುವ ಕಲಬುರಗಿ ಜಿಲ್ಲೆಯಲ್ಲೇ ಕನ್ನಡ ಭಾಷೆ ದಿನಬೆಳಗಾದರೆ ಉರ್ದು, ಹಿಂದಿ, ತೆಲಗು, ಮರಾಠಿ ಭಾಷೆಗಳ ಜೊತೆ ಅಸ್ತಿತ್ವಕ್ಕಾಗಿ ಸೆಣಸಾಡಬೇಕಾಗಿ ಬಂದಿದೆ. ಈ ಬೆಳವಣಿಗೆ ಅದೆಲ್ಲಿ ಕನ್ನಡದ ಗಟ್ಟಿ ನೆಲ ಕಲಬುರಗಿಯಲ್ಲೇ ಕನ್ನಡ ಭಾಷೆಯ ಬಳಕೆಗೆ ಕುತ್ತು ತಂದೊಡುತ್ತದೆಯೋ ಎಂಬ ಆತಂಕ ಮೂಡಿದೆ. ಕನ್ನಡ ಈ ನೆಲದ ಭಾಷೆ, ಇಲ್ಲಿನ ಜನರ ಭಾಷೆ ಎಂಬುದರಲ್ಲಿ ದೂಸ್ರಾ ಮಾತಿಲ್ಲ. ಆದರೆ ಇಲ್ಲಿರುವ ಕೆಲವು ಪ್ರದೇಶಗಳಲ್ಲಿ ಮಾತ್ರ ಕನ್ನಡ ಮಾಯವಾಗುತ್ತ ಹೊರಟಿದೆ.

ಕವಿರಾಜ ಮಾರ್ಗದ ನೆಲ ಸೇಡಂ ಸೀಮೆಯಲ್ಲಿಯೇ ಕನ್ನಡದ ಮೇಲೆ ತೆಲಗು ಭಾಷೆಯ ಸವಾರಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದನ್ನು ಜಿಲ್ಲೆಯ ತೆಲುಗನ್ನಡ ನೆಲವೆಂದೇ ಕರೆಯಲಾಗುತ್ತಿದೆ. ಇಲ್ಲಿನ ಯಾನಾಗುಂದಿ ಗಡಿ ಭಾಗದಿಂದ ಸಾಗುವ ತೆಲಗು ಪ್ರಭಾವ ನಾಲ್ಕಾರು ಪಂಚಾಯ್ತಿಗಳಲ್ಲಿ ಸ್ಪಷ್ಟ. ಮೋತಕಪಲ್ಲಿ ಸೇರಿದಂತೆ ಅನೇಕ ಹೋಬಳಿಗಳಲ್ಲಿ ದಿನದ ಆಡುಭಾಷೆಯೂ ತೆಲಗು, ಹೀಗಾಗಿ ಕವಿರಾಜ ಮಾರ್ಗ ನೆಲದಲ್ಲಿ ಇದೀಗ ಕನ್ನಡ ಜಾಗೃತಿ ಮೂಡಿಸುವ ಕಾಲ ಬಂದಂತಾಗಿದೆ.

ಅಫಜಲ್ಪುರ- ಆಳಂದ ಮರಾಠಿಮಯ: ಅಫಜಲ್ಪುರ- ಆಳಂದ ಗಡಿಗ್ರಾಮಗಳಲ್ಲಿ ಮರಾಠಿ ಪ್ರಾಬಲ್ಯ. ಸ್ಟೇಷನ್ ಗಾಣಗಾಪುರ, ದೇವಲ್ ಗಾಣಗಾಪುರ (ದತ್ತನ ಗಾಣಗಾಪುರ) ದಲ್ಲಂತೂ ಮರಾಠಿ ಅಧಿಕ. ಇಲ್ಲಿ ಮರಾಠಿ ದಿನ ಪತ್ರಿಕೆಗಳ ವಹಿವಾಟು ಇತರೆಲ್ಲ ಭಾಷೆಗಳ ಪತ್ರಿಕೆಗಳ ಪ್ರಸಾರ ಹಿಂದಿಕ್ಕಿದೆ ಎಂಬುದು ಇಲ್ಲಿನ ಮರಾಠಿ ಪ್ರಾಬಲ್ಯಕ್ಕೆ ಕನ್ನಡಿ. ಇಲ್ಲಿರುವ ಮಳಿಗೆ- ಮುಂಗಟ್ಟುಗಳ ಮೇಲೂ ಮರಾಠಿ ಫಲಕಗಳೇ ಕಾಣುತ್ತವೆ. ಕನ್ನಡ ಫಲಕಗಳಿದ್ದರೂ ತುಂಬ ಚಿಕ್ಕದಾಗಿರುತ್ತವೆ. ಆಳಂದದ ಅಕ್ಕಲಕೋಟೆ, ಲಾತೂರ ಗಡಿಗಳಲ್ಲಿಯೂ ಮರಾಠಿ ಪ್ರಭಾವ ಅಧಿಕ. ಮೈಂದರ್ಗಿ, ಉಮ್ಮರ್ಗಾ, ವಾಗ್ದರಿ ಸೇರಿದಂತೆ ಗಡಿ ಗ್ರಾಮ ಗಳಲ್ಲಿ ಮರಾಠಿ ಶಾಲೆಗಳು ಇವೆ.

ಕಲಬುರಗಿಯಲ್ಲಿ ಉರ್ದು- ಮರಾಠಿ- ಹಿಂದಿ: ಕಲ ಬುರಗಿ ಮಹಾ ನಗರದಲ್ಲಿ ಉರ್ದು, ಹಿಂದಿ ಹಾಗೂ ಮರಾಠಿ ಪ್ರಭಾವ ಸಾಕಷ್ಟಿದೆ. ನಗರದಲ್ಲಂತೂ ಮಾರುಕಟ್ಟೆ, ಮಳಿಗೆಗಳಲ್ಲಿ ವಹಿವಾಟು ಸಾಗುವುದೇ ಕನ್ನಡೇತರ ಭಾಷೆಗಳಿಂದ. ಇಲ್ಲಿರುವವರಿಗೆ ಕನ್ನಡ ಯಾಕೆ ಮಾತಾಡೋದಿಲ್ಲ ಎಂದು ಕೇಳಿದರೆ ಅವರ ಬಳಿ ಯಾವುದೇ ಕಾರಣವಿಲ್ಲ. ಆದರೂ ಅವರು ಕನ್ನಡ ಮಾತನಾಡೋದಿಲ್ಲ. ಪಾಲಿಕೆ ಯಲ್ಲಿ ಉರ್ದು ಭಾಷಿಕ ಪುರಪಿತೃಗಳೇ 13 ರಿಂದ 15 ರಷ್ಟಿರುವ ಕಾರಣ ಉರ್ದು ಭಾಷೆಯಲ್ಲೇ ನಡಾವಳಿ, ಸಭಾ ಕಾರ್ಯಸೂಚಿಗೂ ಬೇಡಿಕೆ ಕೇಳಿಬಂದಿದ್ದು ಗುಟ್ಟೇನಲ್ಲ. ನಗರದಲ್ಲಿರುವ ಮಳಿಗೆ ಫಲಕಗಳಲ್ಲಿಯೂ ಕನ್ನಡಕ್ಕೆ ಕೊನೆ ಸ್ಥಾನ. ಆಂಗ್ಲ, ನಂತರ ಹಿಂದಿ ಪ್ರಧಾನವಾಗಿ ಬಳಕೆಯಾಗುತ್ತಿದೆ. ಇದರಿಂದಾಗಿ ನಿಧಾನಕ್ಕೆ ಕನ್ನಡ ಇಲ್ಲಿ ಅದೆಲ್ಲೋ ಅನ್ಯ ಭಾಷಾ ಹಾವಳಿಯಲ್ಲಿ ಮರೆ ಯಾಗುತ್ತಿದೆಯೋ ಎಂಬ ಭಾವನೆ ಕನ್ನಡಿಗರಲ್ಲಿ ಕಾಡುತ್ತಿದೆ.