ಕನ್ನಡ ಕಲಿಯುತ್ತಿದ್ದಾರೆ ರಾಜಧಾನಿ ದಿಲ್ಲಿಯ ವಿದ್ಯಾರ್ಥಿಗಳು

Kannada Class For Delhi Students
Highlights

ಕರುನಾಡಿನಿಂದ ಬಹು ದೂರವಿರುವ ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಕಲಿಕೆ ಹೊಸ ವಿಸ್ತಾರಕ್ಕೆ ನೆಗೆದಿದೆ. ಕನ್ನಡತನದ ಗಂಧ ಗಾಳಿಯೇ ಸುಳಿಯದಿರುವ ಊರುಗಳ 40 ವಿದ್ಯಾರ್ಥಿಗಳು ಇಲ್ಲಿ ಕನ್ನಡದ ಓದು ಬರಹ ನಿರತರಾಗಿದ್ದಾರೆ

ರಾಕೇಶ್ ಎನ್.ಎಸ್​

ನವದೆಹಲಿ : ಕರುನಾಡಿನಿಂದ ಬಹು ದೂರವಿರುವ ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಕಲಿಕೆ ಹೊಸ ವಿಸ್ತಾರಕ್ಕೆ ನೆಗೆದಿದೆ. ಕನ್ನಡತನದ ಗಂಧ ಗಾಳಿಯೇ ಸುಳಿಯದಿರುವ ಊರುಗಳ 40 ವಿದ್ಯಾರ್ಥಿಗಳು ಇಲ್ಲಿ ಕನ್ನಡದ ಓದು ಬರಹ ನಿರತರಾಗಿದ್ದಾರೆ.

ದೇಶದ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಪೀಠದಲ್ಲಿ ವಿದೇಶಿಯರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 40 ಮಕ್ಕಳು ಕನ್ನಡದ ಅ, ಆ, ಇ, ಈ ಅಕ್ಷರ ಮಾಲೆ ಕಲಿಯುತ್ತಿದ್ದಾರೆ. ಈ ಮಕ್ಕಳ ಜೊತೆ ಜೆಎನ್‌ಯು ಪ್ರೊಫೆಸರ್ ಜಾನಕಿ ನಾಯರ್ ಕೂಡ ಸೇರಿಕೊಂಡಿದ್ದಾರೆ. ಒಬ್ಬರು ತುಳು ಕಲಿಯುತ್ತಿದ್ದಾರೆ. 2015ರಲ್ಲಿ ಸ್ಥಾಪನೆಯಾದ ಕನ್ನಡ ಪೀಠವು ಕನ್ನಡದಲ್ಲಿ ಉನ್ನತ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ.

ಪೀಠದ ನೇತೃತ್ವ ವಹಿಸಿರುವ ಪ್ರೊ. ಪುರುಷೋತ್ತಮ ಬಿಳಿಮಲೆ ‘ಕನ್ನಡ ಕಲಿಯೋಣ’ ತರಗತಿ ಶುರು ಮಾಡುವ ಹೊತ್ತಿನಲ್ಲಿ 5 ವಿದ್ಯಾರ್ಥಿಗಳು ಸಿಕ್ಕರೆ ಹೆಚ್ಚು ಎಂದುಕೊಂಡಿದ್ದರಂತೆ. ವಿದ್ಯಾರ್ಥಿಗಳ ಕನ್ನಡ ಕಲಿಕೆಯ ವೇಗ ಮತ್ತು ಉತ್ಸಾಹಕ್ಕೆ ಬೆರಗಾಗಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಜನವರಿ 15ರಿಂದ ಏಪ್ರಿಲ್ 15ರವರೆಗೆ ‘ಕನ್ನಡ ಕಲಿಯೋಣ’ ತರಗತಿಗಳು ನಡೆಯಲಿವೆ.

ವಾರದಲ್ಲಿ 3 ದಿನ, ಒಟ್ಟು 6 ಗಂಟೆ ತರಗತಿ ನಡೆಯುತ್ತಿದೆ. ಈ ಬಾರಿಯದ್ದು ಪ್ರಾಯೋಗಿಕ ತರಗತಿಗಳು. ಆದರೆ, ಮುಂದಿನ ಶೈಕ್ಷಣಿಕ ವರ್ಷದ ಜುಲೈನಲ್ಲಿ ತರಗತಿ ಪ್ರಾರಂಭಿಸಲಿದ್ದು, ಆಗ 9 ತಿಂಗಳು ಕನ್ನಡದ ತರಗತಿಗಳು ನಡೆಯಲಿವೆ.

ಚಲನಚಿತ್ರ ಗೀತೆಗಳೂ ಸ್ಫೂರ್ತಿ: ಕೆಲವರಿಗೆ ಹೊಸ ಭಾಷೆ ಕಲಿಯುವ ಆಸೆಯಾದರೆ, ಮತ್ತೆ ಕೆಲವರಿಗೆ ಕನ್ನಡದ ಗುಂಡು ಗುಂಡಾಗಿರುವ ಲಿಪಿಗೆ ಆಕರ್ಷಿತರಾದರೆ, ಅರುಣ್ ಎಂಬುವವರು ಉಪೇಂದ್ರ ಅಭಿನಯದ ‘ಗಾಡ್ ಫಾದರ್’, ಸತ್ಯ ಕುಮಾರ್ ಎಂಬುವವರು ‘ಮುಂಗಾರು ಮಳೆ’ ಸಿನಿಮಾದ ಹಾಡು ಕೇಳಿ ಕನ್ನಡದ ಕಲಿಯುವ ಆಸೆ ಬೆಳೆಸಿಕೊಂಡಿದ್ದರು. ದ್ರಾವಿಡ ಭಾಷೆಯಾದ ಕನ್ನಡ ಕಲಿಯಬೇಕು ಎಂಬ ಆಸೆ ಕೆಲವರಿಗಿದ್ದರೆ, ವಸಂತ್ ಶೆಟ್ಟಿ ಅವರ ಒಕ್ಕೂಟ ವ್ಯವಸ್ಥೆಯ ಬಗ್ಗೆಗಿನ ಚಳವಳಿ ಮತ್ತು ಶಂಕರ್‌ಭಟ್ ಅವರ ಶುದ್ಧ ಕನ್ನಡದ ಚಳವಳಿಯಿಂದ ಪ್ರೇರಿತರಾಗಿಯೂ ಇಲ್ಲಿ ಕನ್ನಡ ಕಲಿಯುವವರಿದ್ದಾರೆ.

ಚೀನಾ ಮೂಲದ ಚೆನ್ ಸಿಯಾಂಗ್ ಹಿಂದಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದು, ‘ನಾನು ವ್ಯಾಕರಣಗಳ ಬಗ್ಗೆ ಅಧ್ಯಯನ ನಡೆಸುವ ಗುರಿ ಹೊಂದಿದ್ದೇನೆ. ಲಿಪಿಗಳ ರಚನೆ, ಬೆಳವಣಿಗೆ ಮತ್ತು ಬಳಕೆಯ ಬಗ್ಗೆ ಆಸಕ್ತಿ ಹೊಂದಿದ್ದು, ಈ ನಿಟ್ಟಿನಲ್ಲಿ ಕನ್ನಡ ಕಲಿಯುತ್ತಿದ್ದೇನೆ’ ಎಂದು ಹೇಳುತ್ತಾರೆ.

ಉಳಿದಂತೆ ಬಂಗಾಳಿ, ಗುಜರಾತಿ, ಹಿಂದಿ, ತಮಿಳು, ತೆಲುಗು, ಮಾಲಯಾಳಂ ಮಾತೃಭಾಷೆಯ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಕರ್ನಾಟಕ ಮೂಲದ ಇಬ್ಬರು ಕನ್ನಡ ಭಾಷೆಯ ಮೇಲಿನ ಹಿಡಿತ ಪಡೆಯಲು ಅಧ್ಯಯನ ನಡೆಸುತ್ತಿದ್ದಾರೆ.

loader