ನಾಗ್ಪುರ್(ಡಿ.24): ದೇಶದಲ್ಲಿ ಆತಂಕದಲ್ಲಿರವುದು ಹಿಂದೂಗಳಲ್ಲ, ಬದಲಿಗೆ ಸಂವಿಧಾನ ಆತಂಕದಲ್ಲಿದೆ ಎಂದು ಯುವ ಹೋರಾಟಗಾರ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.

ಇಲ್ಲಿನ ಮಂಕಾಪುರ್ ಒಳಾಂಗಣ ಕ್ರೀಡಾಂಗಣದಲ್ಲಿ ಬಹುಜನ್ ವಿಚಾರ್ ಮಂಚ್ ಆಯೋಜಿಸಿದ್ದ 'ಸಂವಿಧಾನ್ ಜಾಗರ್' ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ಹಯ್ಯಾ, ಹಿಂದೂ ಧರ್ಮವಾಗಲಿ, ಹಿಂದೂಗಳಾಗಲಿ ಆತಂಕದಲ್ಲಿಲ್ಲ, ಬದಲಿಗೆ ಧರ್ಮದ ಹೆಸರು ಹೇಳಿಕೊಂಡು ಸಂವಿಧಾನದ ಮೇಲೆ ಆಕ್ರಮಣ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.

ಲೋಕಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಆದರೂ ಪ್ರಧಾನಿ ಮೋದಿ ಪ್ರತಿಪಕ್ಷಗಳು ಕಲಾಪ ನಡೆಯಲು ಬಿಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಅಸಲಿಗೆ ಕಲಾಪ ನಡೆಯುವುದು ಖುದ್ದು ಪ್ರಧಾನಿ ಅವರಿಗೇ ಬೇಕಿಲ್ಲ ಎಂದು ಕನ್ಹಯ್ಯಾ ಆರೋಪಿಸಿದರು.

ಬಿಜೆಪಿಯವರನ್ನು ದಂಗೆ ಪ್ರಚೋದಿಸುವವರು ಎಂದು ಆರೋಪಿಸಿದ ಕನ್ಹಯ್ಯಾ, ೨೦೦೨ರ ಗುಜರಾತ್ ದಂಗೆ ಸಮಯದಲ್ಲಿ ಅಲ್ಪಸಂಖ್ಯಾತರ ಆಶ್ರಯ ಶಿಬಿರಕ್ಕೆ ಭೇಟಿ ನೀಡುವಂತೆ ಮೋದಿ ಅವರನ್ನು ಕೇಳಿದಾಗ ಮಕ್ಕಳನ್ನು ಹೆರುವ ಕ್ಯಾಂಪ್‌ಗೆ ಹೊಗಿ ನಾನೇನು ಮಾಡಲಿ ಎಂದು ಹೇಳಿದ್ದನ್ನು ಉಲ್ಲೇಖಿಸಿದರು.