ಉಡುಪಿಯ ಶ್ರೀ ಕೃಷ್ಣ ದೇವಾಲಯದಲ್ಲಿರೋ ಕನಕನ ಕಿಂಡಿ ಕುರಿತು ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಈ ವಿವಾದದ ವಿಷಯ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಏನದು ವಿವಾದ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.

ಮಂಡ್ಯ(ಮೇ 03): ಕನಕನ ಕಿಂಡಿ ಇರೋದು ಉಡುಪಿಯಲ್ಲಿ, ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಇದೇ ಕನಕನ ಕಿಂಡಿ ಕುರಿತು ವಿವಾದವೊಂದು ಹುಟ್ಟಿಕೊಂಡಿದೆ. ಮೇಲುಕೋಟೆಯ ಸ್ಥಾನೀಯ ಅರ್ಚಕರು ಹಾಗೂ ಮೇಲುಕೋಟೆಯ ಇತಿಹಾಸಕಾರ ಶೆಲ್ವಪಿಳ್ಳೆ ಅಯ್ಯಂಗಾರ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ... ಎಂಬ ಭಕ್ತ ಕನಕದಾಸರ ಕೀರ್ತನೆ ಹುಟ್ಟಿದ್ದು, ಮಂಡ್ಯ ಜಿಲ್ಲೆಯ ಮೇಲುಕೋಟೆಯಿಂದಲೇ ಹೊರತು ಉಡುಪಿಯಿಂದಲ್ಲ ಎಂದು ಅರ್ಚಕ ಶೆಲ್ವ ಪಿಳ್ಳೇ ಹೇಳಿದ್ದಾರೆ. ಕನಕದಾಸರು ಉಡುಪಿಗೆ ಹೋಗಿದ್ದ ಬಗ್ಗೆ ಯಾವುದೇ ಪುರಾವೆಗಳಿಲ್ಲ . ಭಕ್ತ ಕನಕದಾಸರು ಮೇಲುಕೋಟೆಯಲ್ಲಿ 10-12 ದಿನಗಳ ಕಾಲ ತಂಗಿದ್ದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ರಾಮಾನುಜಾಚಾರ್ಯರ ಉತ್ಸವ ಮೂರ್ತಿ ಸಂಪ್ರದಾಯ ನೋಡಿದ್ದ ಕನಕದಾಸರು ಬಾಗಿಲನು ತೆರೆದು ಸೇವೆಯನು ಕೊಡು ಕೀರ್ತನೆಯಲ್ಲಿ ಅದನ್ನು ಉಲ್ಲೇಖಿಸಿದ್ದಾರೆ. ಆದ್ರಿಂದ ಇದು ಮೇಲುಕೋಟೆಗೆ ಸಂಬಂಧಪಟ್ಟ ಕೀರ್ತನೆಯೇ ಹೊರತು ಉಡುಪಿಯದ್ದಲ್ಲ ಅನ್ನೋ ವಿವಾದಾತ್ಮಕ ವಾದ ಮಂಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀಗಳು ಅನಾವಶ್ಯಕ ಗೊಂದಲ ಸೃಷ್ಟಿಸುವ ಕೆಲಸ ಇದು. ಪುರಂದರದಾಸ, ಶಂಕರಾಚಾರ್ಯ, ರಾಮಾನುಜಾಚಾರ್ಯರ ಪವಾಡಗಳ ಬಗ್ಗೆ ಕಥೆಗಳಿವೆ. ಆದ್ರೆ ಕನಕದಾಸರ ಬಗ್ಗೆ ಮಾತ್ರೆ ಚರ್ಚೆ ಸರಿಯಲ್ಲ. ಕನಕ ಉಡುಪಿಗೆ ಬಂದ ಬಗ್ಗೆ ದಾಖಲೆಯಿದೆ ಎಂದಿದ್ದಾರೆ.

ಇದೇ ವೇಳೆ, ಸುವರ್ಣನ್ಯೂಸ್'ನಲ್ಲಿ ಶೆಲ್ವ ಪಿಳ್ಳೈ ಅಯ್ಯಂಗಾರ್ ಮತ್ತು ಆಧ್ಯಾತ್ಮಿಕ ಚಿಂತಕ ಹರೀಶ್ ಕಶ್ಯಪ್ ನಡುವೆ ಈ ವಿಚಾರವಾಗಿ ಗಂಭೀರ ಚರ್ಚೆ ಮತ್ತು ವಾಗ್ವಾದಗಳಾದವು. ಒಟ್ಟಾರೆ ಈ ಹೊಸ ವಿವಾದ ಭಕ್ತರಲ್ಲಿ ಗೊಂದಲ ಮೂಡಿಸಿರೋದಂತು ಸತ್ಯ.

ಉಡುಪಿಗೆ ಏನು ನಂಟು?
* ಕಾಗಿನೆಲೆಯ ಆದಿಕೇಶವನಂತೆ ಉಡುಪಿಯ ಕೃಷ್ಣನಿಗೂ ಕನಕದಾಸರಿಗೂ ನಂಟು
* ಕನಕದಾಸರು ಶ್ರೀಕೃಷ್ಣ ದರ್ಶನಕ್ಕೆ ಉಡುಪಿಗೆ ಹೋದಾಗ ಒಳಗೆ ಬಿಡಲಿಲ್ಲವಂತೆ
* ಕನಕದಾಸರು ದೇವಸ್ಥಾನದ ಹಿಂದಿನಿಂದ ಶ್ರೀಕೃಷ್ಣನ ಕೀರ್ತನೆಯನ್ನು ಹಾಡಿದ್ರಂತೆ
* ಶ್ರೀಕೃಷ್ಣ ಹಿಂದೆ ತಿರುಗಿ ಗೊಡೆಯ ಕಿಂಡಿ ಮೂಲಕ ದರ್ಶನ ನೀಡಿದನಂತೆ
* ಆ ಕಿಂಡಿ ಇಂದಿಗೂ ಕನಕನ ಕಿಂಡಿ ಎಂದೆ ಪ್ರಸಿದ್ಧವಾಗಿದೆ

ಕನಕನ ಕಿಂಡಿ ವಿವಾದ:
* ಜನ್ಮಾಷ್ಟಮಿಯಲ್ಲಿ ಕನಕನ ಕಿಂಡಿಯನ್ನು ನವಗ್ರಹ ಕಿಂಡಿಯೆಂದು ಬಿಂಬಿಸಲಾಗಿತ್ತು
* ಶ್ರೀಕೃಷ್ಣ ಮಠದಿಂದ ಇತಿಹಾಸ ತಿರುಚುವ ಯತ್ನ ಎಂದು ಆಪಾದಿಸಲಾಗಿತ್ತು
* ಕನಕನ ಕಿಂಡಿಯೆ ಬೇರೆ ನವಗ್ರಹ ಕಿಂಡಿಯೆ ಬೇರೆ ಎಂದು ಸ್ಪಷ್ಟಪಡಿಸಿರುವ ಕೃಷ್ಣಮಠ
* ಶ್ರೀಕೃಷ್ಣಭಗವಂತನು ಕಿಂಡಿಯ ಮೂಲಕ ದರ್ಶನ ನೀಡಿದ್ದ ಐತಿಹ್ಯ ಉಡುಪಿಯಲ್ಲಿದೆ
* ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣದರ್ಶನ ಮಾಡುವುದು ಕಡ್ಡಾಯ ಸಂಪ್ರದಾಯ

‘ಕನಕ’ನ ಹಿನ್ನೆಲೆ:
* ಹರಿದಾಸ ಸಾಹಿತ್ಯದ ಶ್ರೇಷ್ಠ ಕವಿಪುಂಗವರೆಂದೇ ಕರೆಸಿಕೊಂಡ ದಾಸವೇಣ್ಯರು
* ಕುರುಬ ಜನಾಂಗದಲ್ಲಿ ಹುಟ್ಟಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಕನಕದಾಸರು
* ಜೀವನದಲ್ಲಿ ವೈರಾಗ್ಯವನ್ನು ಪಡೆದು ಭಕ್ತಿ ಪಥವನ್ನು ಅನುಸರಿಸಿದರು
* ಹಲವಾರು ಕೀರ್ತನೆಗಳನ್ನು ಭಜನೆಗಳನ್ನು ರಚಿಸಿ ದಾಸ ಶೇಷ್ಠರೆಂದೇ ಖ್ಯಾತಿ
* ಮೂಲ ಹೆಸರು ತಿಮ್ಮಪ್ಪ ನಾಯಕ, ಹುಟ್ಟೂರು ಹಾವೇರಿ ಜಿಲ್ಲೆಯ ಬಾಡ ಗ್ರಾಮ
* ಕಾಗಿನೆಲೆಯ ಆದಿಕೇಶವನನ್ನು ಆರಾಧ್ಯವಾಗಿ ಸ್ವೀಕರಿದ ಕನಕದಾಸರು
* ಭಕ್ತಿ ಸಾಧನೆಗಾಗಿ ಹಂಪಿಯಲ್ಲಿ ವ್ಯಾಸರಾಜರನ್ನು ಭೇಟಿಯಾದರು
* ವ್ಯಾಸರಾಯರಿಂದ ಪ್ರಭಾವಿತರಾದ ಕನಕದಾಸರು ಗುರುವಾಗಿ ಸ್ವೀಕರಿಸಿದರು
* ವೇದ ಉಪನಿಶತ್ತು, ವೈಷ್ಣವ ಧರ್ಮ ಮುಂತಾದವುಗಳ ಬಗ್ಗೆ ಜ್ಞಾನ ಸಂಪಾದನೆ
* ಕನಕದಾಸರು ದಾಸ ಸಾಹಿತ್ಯ ಮತ್ತು ಸಂಗೀತಕ್ಕೆ ಮಹತ್ತರವಾದ ಕಾಣಿಕೆ

- ರಾಘವೇಂದ್ರ ಗಂಜಾಮ್, ಸುವರ್ಣನ್ಯೂಸ್