ಯುವ ಬ್ರಿಗೇಡ್ ಮತ್ತು ಇತರ ಸಮಾನಮನಸ್ಕ ಸಂಘಟನೆಗಳು ಉಡುಪಿ ನಗರವನ್ನು ಸ್ವಚ್ಛಗೊಳಿಸುವ ಕನಕ ನಡೆ ಅಭಿಯಾನ ಕೇವಲ ನೂರಿನ್ನೂರು ಮೀಟರ್ ಉದ್ದದ ಕನಕದಾಸ ರಸ್ತೆಗಷ್ಟೇ ಸೀಮಿತವಾಗಿದೆ. ಈ ಅಭಿಯಾನಕ್ಕೆ ಪ್ರತಿಯಾಗಿ ಪ್ರಗತಿಪರರು ಮತ್ತು ದಮನಿತರು ಆಯೋಜಿಸಿದ್ದ ದಲಿತ ಸ್ವಾಭಿಮಾನ ನಡೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.

ಉಡುಪಿ(ಅ.21): ಉಡುಪಿಯಲ್ಲಿ ಭಾನುವಾರ ನಡೆಯಲಿದ್ದ ಎರಡು ಪ್ರತ್ಯೇಕ ಮತ್ತು ಪರಸ್ಪರ ವಿರೋಧಿ ಅಭಿಯಾನಗಳಿಂದ ಸಂಭವಿಸಬಹುದಾಗಿದ್ದ ಮುಖಾಮುಖಿಯ ಆತಂಕ ದೂರವಾಗಿದೆ.

ಯುವ ಬ್ರಿಗೇಡ್ ಮತ್ತು ಇತರ ಸಮಾನಮನಸ್ಕ ಸಂಘಟನೆಗಳು ಉಡುಪಿ ನಗರವನ್ನು ಸ್ವಚ್ಛಗೊಳಿಸುವ ಕನಕ ನಡೆ ಅಭಿಯಾನ ಕೇವಲ ನೂರಿನ್ನೂರು ಮೀಟರ್ ಉದ್ದದ ಕನಕದಾಸ ರಸ್ತೆಗಷ್ಟೇ ಸೀಮಿತವಾಗಿದೆ. ಈ ಅಭಿಯಾನಕ್ಕೆ ಪ್ರತಿಯಾಗಿ ಪ್ರಗತಿಪರರು ಮತ್ತು ದಮನಿತರು ಆಯೋಜಿಸಿದ್ದ ದಲಿತ ಸ್ವಾಭಿಮಾನ ನಡೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.

ಗೊಂದಲದ ಹಿನ್ನೆಲೆ: ಅ.9ರಂದು ಉಡುಪಿಯಲ್ಲಿ ರಾಜ್ಯಾದ್ಯಂತದಿಂದ ಬಂದ ದಲಿತರು ದಮನಿತರು ಪ್ರಗತಿಪರರು ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಚಲೋ ಉಡುಪಿ ಎಂಬ ಬೃಹತ್ ಸಮಾವೇಶವನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಡುಪಿ ಕೃಷ್ಣಮಠದ ಪಂಕ್ತಿಭೇದದ ವಿರುದ್ಧ ಉಗ್ರ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಕೆರಳಿದ ಯುವ ಬ್ರಿಗೇಡ್ ಮತ್ತು ಇತರ ಸಂಘಟನೆಗಳು ‘ಕನಕ ನಡೆ’ ಎಂಬ ಕಾರ್ಯಕ್ರಮವನ್ನು ಘೋಷಿಸಿದವು. ಚಲೋ ಉಡುಪಿಯಿಂದ ಉಡುಪಿಯ ವಾತಾವರಣ ಕಲುಷಿತವಾಗಿದೆ, ಆದ್ದರಿಂದ ಅ.23ರಂದು ಉಡುಪಿಯಲ್ಲಿ ಗುಡಿಸಿ ಶುದ್ಧೀಕರಿಸುತ್ತೇವೆ ಎಂದು ಸಂಘಟಕರ ಆರಂಭದಲ್ಲಿ ಹೇಳಿದ್ದರು. ನಂತರ ನಮ್ಮದು ಕೇವಲ ಕಸ ಗುಡಿಸುವ ಕೆಲಸ ಅಷ್ಟೇ ಎಂದು ತಿದ್ದಿಕೊಂಡಿದ್ದರು.

ಚಲೋ ಉಡುಪಿ ಜಾಥಾ ನಡೆದ ರಸ್ತೆಗಳನ್ನು ಶುದ್ಧೀಕರಿಸುವ ಮೂಲಕ ಯುವ ಬ್ರಿಗೆಡ್ ಮತ್ತು ಬಲಪಂಥೀಯ ಸಂಘಟನೆಗಳು ಪ್ರತ್ಯಕ್ಷವಾಗಿ ಅಸ್ಪಶ್ಯತೆಯನ್ನು ಜಾರಿಗೊಳಿಸುತ್ತಿವೆ ಎಂದು ಆರೋಪಿಸಿ, ಅದರ ವಿರುದ್ಧ ದಲಿತ ಸ್ವಾಭಿಮಾನಿ ನಡೆ ಎಂಬ ಕಾರ್ಯಕ್ರಮವನ್ನು ಅ.23ರಂದೇ ನಡೆಸುವುದಾಗಿ ಚಲೋ ಉಡುಪಿ ಸಂಘಟಕರು ಘೋಷಿಸಿದ್ದರು. ಪೊಲೀಸ್ ಪರವಾನಗಿ ಪಡೆಯಲು ಹೋದ ದಲಿತ ನಡೆ ಸಂಘಟಕರಿಗೆ ಪರವಾನಗಿ ಸಿಕ್ಕಿಲ್ಲ.

ಈ ನಡುವೆ, ಚಲೋ ಉಡುಪಿ ಕಾರ್ಯಕ್ರಮದಲ್ಲಿ ದಲಿತರು ಮೆರವಣಿಗೆ ನಡೆಸಿದ ರಸ್ತೆಗಳನ್ನು ಗುಡಿಸಿದರೆ ಅಸ್ಪಶ್ಯತೆ ಕಾಯ್ದೆಯನ್ವಯ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಇಲಾಖೆ ಕನಕ ನಡೆ ಸಂಘಟಕರಿಗೆ ಎಚ್ಚರಿಸಿದ್ದಾರೆ. ಆದ್ದರಿಂದ ಸಂಘಟಕರು ಈ ಮೆರವಣಿಗೆ ನಡೆಯದಿದ್ದ ಕನಕದಾಸ ರಸ್ತೆಯಲ್ಲಿ ಮತ್ತು ಉಡುಪಿ ರಥಬೀದಿಯಲ್ಲಷ್ಟೇ ಗುಡಿಸಲು ನಿರ್ಧರಿಸಿದ್ದಾರೆ.