ಜಲ್ಲಿಕಟ್ಟು ಆಚರಣೆಯಲ್ಲಿ ಹಲವಾರು ಮಂದಿ ಸಾವಿಗೀಡಾದ್ದಾರೆ. ಈಗ ಸುಪ್ರೀಂ ಕೋರ್ಟ್‌ ಯಾವ ನಿರ್ಧಾರ ಮಾಡುತ್ತದೆ ಎಂಬುದನ್ನು ಕಾದು ನೋಡೋಣ. ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳ ಆಚರಣೆ ಕುರಿತು ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಾಕಷ್ಟುಚರ್ಚೆಯಾಯಿತು. ಈ ವಿವಾದ ಕೋರ್ಟ್‌ನಲ್ಲಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ - ಎಚ್‌.ಡಿ.ದೇವೇಗೌಡ ಮಾಜಿ ಪ್ರಧಾನಿ

ಬೆಂಗಳೂರು(ಜ.23) :ಜಲ್ಲಿಕಟ್ಟು ನಿಷೇಧ ತೆರವು ಬಳಿಕ ಕಂಬಳ ಪರ ಎದ್ದಿರುವ ದನಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದು ಇದೀಗ ಪಕ್ಷ, ಪ್ರಾಂತ ಭೇದವಿಲ್ಲದೆ ಬೆಂಬಲ ವ್ಯಕ್ತವಾಗು­ತ್ತಿದೆ. ಕಲಬುರಗಿ ಬಿಜೆಪಿ ಕಾರ್ಯಕಾರಣಿಯಲ್ಲಿ ಕಂಬಳ ಪರ ನಿಲುವು ತೆಗೆದು­ಕೊಂಡಿದ್ದರೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡಿಸ್‌, ಚಿತ್ರನಟ ಶಿವರಾಜ್‌ಕುಮಾರ್‌ ಬೆಂಬಲ ವ್ಯಕ್ತಪಡಿಸಿ­ದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯೂ ಸೇರಿದಂತೆ ಮೂರು ಕಡೆ ಪ್ರತಿಭಟನೆಗಳು ನಡೆದಿವೆ.ಮೈಸೂರಿನಲ್ಲಿ ಸಂಸದರ ಭಾವಚಿತ್ರ­ಗಳಿಗೆ ಹಾರ ಹಾಕಿ, ಜೋಡಿ ಎಮ್ಮೆ­ಗಳೊಂದಿಗೆ ಪ್ರತಿಭಟನೆ ನಡೆಸಲಾಗಿದೆ. 
ಬಿಎಸ್‌ವೈ ಬೆಂಬಲ: ರಾಜ್ಯದಲ್ಲಿ ಪ್ರತಿಧ್ವನಿಸಿರುವ ಕರಾವಳಿಯ ಸಾಂಪ್ರದಾಯಿಕ ಆಚರಣೆ ಕಂಬಳ ಪರವಾಗಿ ಹೋರಾಟದ ಕಹಳೆ ಮೊಳಗುತ್ತಿದ್ದಂತೆಯೇ ಕಲಬುರಗಿಯಲ್ಲಿ ಕಾರ್ಯಕಾರಿಣಿ ಸೇರಿದ್ದ ಬಿಜೆಪಿ ಈ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದ ಕರಾವಳಿ ಭಾಗದ ಕಂಬಳದ ಮೇಲಿನ ನಿಷೇಧ ಹಿಂತೆಗೆತಕ್ಕೆ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಕಾನೂನು ಸಚಿವರು ಕೇಂದ್ರ ಸರ್ಕಾರಕ್ಕೆ ಪ್ರಬಲ ಬೇಡಿಕೆ ಸಲ್ಲಿಸಬೇಕು.
-ನಳಿನ್‌ಕುಮಾರ್‌ ಕಟೀಲ್‌, ಸಂಸದ


ತಮಿಳುನಾಡಿನ ಜಲ್ಲಿಕಟ್ಟಿನಂತೆ ನಮ್ಮ ಕಂಬಳಕ್ಕೇನು ಸಮಸ್ಯೆ ಉದ್ಭವವಾಗಿಲ್ಲ. ತಮಿಳುನಾಡು ಮತ್ತು ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಂಡಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲು ಜಲ್ಲಿಕಟ್ಟಿನಂತೆ ಸಮಸ್ಯೆಯೇನೂ ಇಲ್ಲ. ಒಂದು ವೇಳೆ ನ್ಯಾಯಾಲಯ ನಿಷೇಧಿಸಿ ಸಮಸ್ಯೆಯಾದಾಗ ಎದುರಿಸೋಣ.
ಆಸ್ಕರ್‌ ಫರ್ನಾಂಡಿಸ್‌, ಸಂಸದ


ಮೂಡುಬಿದಿರೆ: ತುಳುನಾಡಿನ ವೀರ ಕ್ರೀಡೆ ಕಂಬಳ ನಡೆಯುವ ಬಗ್ಗೆ ಹೈಕೋರ್ಟ್‌ ತೀರ್ಪಿಗೆ ಕಾಯುತ್ತಿರುವ ನಡುವೆಯೇ ಜನವರಿ 28ರಂದು ತೀರ್ಪು ಪರವಾಗಿ ಬಂದರೆ ವಿಜಯೋತ್ಸವ ಇಲ್ಲವಾದರೆ ಕಂಬಳ ನಡೆಸುವ ಮೂಲಕವೇ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಕಾಸರಗೋಡು ಸೇರಿದಂತೆ ಅವಿಭಜಿತ ದ.ಕ.ಜಿಲ್ಲಾ ಕಂಬಳ ಸಮಿತಿ ವತಿಯಿಂದ ಕಂಬಳದ ಕೋಣಗಳ ಮಾಲೀಕರು, ಓಟಗಾರರು, ಹಿತೈಷಿಗಳ ಸಮಾಲೋಚನಾ ತುರ್ತು ಸಭೆ ಎಂ.ಸಿ.ಎಸ್‌. ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದಿದ್ದು ಈ ನಿರ್ಧಾರ ಕೈಗೊಳ್ಳಲಾಗಿದೆ. 
‘‘ಕಂಬಳ ನಮ್ಮ ಸಾಂಪ್ರದಾಯಿಕ ಕ್ರೀಡೆ. ಇದಕ್ಕೂ ಪರವಾನಿಗೆ ಕೊಡಲೇ​ಬೇಕು. ಈ ವಿಚಾರದಲ್ಲಿನ ಜನರ ಹೋರಾ​ಟಕ್ಕೆ ನಮ್ಮ ಬೆಂಬಲವಿದೆ. ನಾವೂ ಜನರೊಟ್ಟಿಗೆ ಸೇರಿ ಕಂಬಳ ಆಚ​ರ​ಣೆಗೂ ಅವಕಾಶ ಕೊಡುವಂತೆ ಗಮನ ಸೆಳೆ​ಯುತ್ತೇವೆ'' ಎಂದು ಬಿಜೆಪಿ ರಾಜ್ಯಾ​ಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ಕರಾವಳಿಯ ಪ್ರಸಿದ್ಧ ಜನಪದ ಕ್ರೀಡೆ ಕಂಬಳದ ಮೇಲಿನ ನಿಷೇಧ ಸರಿಯಲ್ಲ, ಅದು ಜನರ ಸಂಪ್ರದಾಯದ ಆಚರಣೆ, ಅದನ್ನು ಆಚರಿಸಲು ಅವಕಾಶ ನೀಡಬೇಕು ಎಂದು ನಾಯಕನಟ ಶಿವರಾಜ್ ಕುಮಾರ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಂಬಳದಲ್ಲಿ ಹಿಂಸೆ ಆಗುತ್ತದೆ ಎನ್ನುವ ವಾದ ಸರಿಯಲ್ಲ, ರೈತ ತಾನು ಸಾಕಿದ ಕೋಣ, ಎತ್ತುಗಳಿಂದ ಗದ್ದೆಗಳನ್ನು ಉಳುವಾಗ ಒಂದೆರಡು ಪೆಟ್ಟು ಪ್ರೀತಿಯಿಂದ ಹೊಡೆಯುತ್ತಾನೆ. ಅದನ್ನು ತಪ್ಪು ಎಂದು ಹೇಳುವಂತಿಲ್ಲ ಎಂದವರು ಅಭಿಪ್ರಾಯ​ಪಟ್ಟಿ​ದ್ದಾರೆ. ತಮ್ಮ ಗೆಳೆಯರೊಬ್ಬರು ಕಂಬಳವನ್ನೇ ಕತೆಯಾಗಿಟ್ಟುಕೊಂಡು ಸಿನೆಮಾವೊಂದನ್ನು ನಿರ್ಮಿಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ಅಷ್ಟರಲ್ಲಿ ಕಂಬಳ ನಿಷೇಧ ಜಾರಿಗೆ ಬಂದಿದೆ. ಆದ್ದರಿಂದ ಚಿತ್ರೀಕರಣ ಆರಂಭವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. 
ನವದೆಹಲಿಯಲ್ಲಿ ಪ್ರತಿಭಟನೆ: ಕಂಬಳ ಹಾಗೂ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕನ್ನಡಿಗರು ಭಾನುವಾರ ಬೃಹತ್‌ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು. ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕದ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳಕ್ಕೆ ಅವಕಾಶ ನೀಡಬೇಕು. ಕಾವೇರಿಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿಬೆಳ್ಳಾರೆ ಆಗ್ರಹಿಸಿದ್ದಾರೆ. 
ಸಂಸದರ ವಿರುದ್ಧ ಆಕ್ರೋಶ: ಸುಗ್ರೀವಾಜ್ಞೆ ಮೂಲಕ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆಸಲು ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕದಲ್ಲೂ ಕಂಬಳ ನಡೆಸಲು, ಕಾವೇರಿ, ಮಹದಾಯಿ ನೀರಿನ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಕರ್ನಾಟಕ ಕಾವಲುಪಡೆ ಕಾರ್ಯಕರ್ತರು ಭಾನುವಾರ ಮೈಸೂರಿನಲ್ಲಿ ಪ್ರತ್ಯೇಕವಾಗಿ ಪ್ರತಿಭಟಿಸಿದರು. ಕರ್ನಾಟಕದಿಂದ ಆಯ್ಕೆಯಾದ 17 ಮಂದಿ ಬಿಜೆಪಿ ಸಂಸದರು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, 17 ಮಂದಿ ಸಂಸದರ ಭಾವಚಿತ್ರಗಳಿಗೆ ಗಂಧದ ಹಾರ ಹಾಕಿ ಸನ್ಮಾನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಎಮ್ಮೆಗಳೊಂದಿಗೆ ಕಾವಲುಪಡೆ: ಮೈಸೂರು ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಕರ್ನಾಟಕ ಕಾವಲುಪಡೆಯ ಕಾರ್ಯಕರ್ತರು ಜೋಡಿ ಎಮ್ಮೆಗಳೊಂದಿಗೆ ಪ್ರತಿಭಟಿಸಿ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಸಲು ಸುಗ್ರೀವಾಜ್ಞೆ ಹೊರಡಿಸಿರುವ ಕೇಂದ್ರ ಸರ್ಕಾರವು ಕರ್ನಾಟಕದಲ್ಲೂ ಕಂಬಳ ನಡೆಸಲು, ಕಾವೇರಿ, ಮಹದಾಯಿ ನೀರಿನ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಾಯಿಸಿದರು.

(ಕನ್ನಡಪ್ರಭ ವಾರ್ತೆ)