ಭೋಪಾಲ್‌[ಜು.14]: ಅಕ್ರಮ ಭೂ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ಬುಡಕಟ್ಟು ಸಮುದಾಯದ ರೈತರ ಮೇಲೆ ಅರಣ್ಯಾಧಿಕಾರಿಗಳು, ಪೆಲ್ಲೆಟ್‌ಗನ್‌ನಿಂದ ದಾಳಿ ನಡೆಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಜುಲೈ 9ರಂದೇ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಕುರಿತು ತನಿಖೆಗೆ ಮುಖ್ಯಮಂತ್ರಿ ಕಮಲ್‌ನಾಥ್‌ ಆದೇಶಿಸಿದ್ದಾರೆ. ಅಲ್ಲದೆ ತಪ್ಪಿತ್ತಸ್ಥ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ರಾಜ್ಯದ ಬುರ್ಹಾನ್‌ಪುರ ಜಿಲ್ಲೆಯ ಸಿವಾಲ್‌ ಎಂಬ ಗ್ರಾಮದಲ್ಲಿ ಜು.9ರಂದು ಜಮೀನು ತೆರವುಗೊಳಿಸಲು ಬಂದ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ರೈತರು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಅರಣ್ಯ ಅಧಿಕಾರಿಗಳ ತಂಡ, ಸ್ವಯಂ ರಕ್ಷಣೆಗಾಗಿ ರೈತರ ಮೇಲೆ ಛಾರಾ ಎಂದು ಹೇಳಲಾಗುವ ಪೆಲ್ಲೆಟ್‌ ಗನ್‌ ಬಳಸಿ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ನಾಲ್ವರು ರೈತರು ಗಾಯಗೊಂಡಿದ್ದರು. ಈ ಘಟನೆ ತೀವ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಕಾಂಗ್ರೆಸ್‌ ಮುಖಂಡರಾರ ದಿಗ್ವಿಜಯ್‌ ಸಿಂಗ್‌ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಘಟನೆಯನ್ನು ಖಂಡಿಸಿ, ಕ್ರಮ ಕೈಗೊಳ್ಳುವಂತೆ ಕಮಲ್‌ನಾಥ್‌ ಅವರನ್ನು ಆಗ್ರಹಿಸಿದ್ದಾರೆ.

ಏನಿದು ಪೆಲೆಟ್‌ ಗನ್‌?

ಪೆಲೆಟ್‌ಗನ್‌ಗಳಲ್ಲಿ ಬುಲೆಟ್‌ ಬದಲು ಸಣ್ಣ ಸಣ್ಣ ಬಾಲ್ಸ್‌ಗಳನ್ನು ಏರ್‌ಗನ್‌ ಮೂಲಕ ಸಿಡಿಸಲಾಗುತ್ತದೆ. ಇವು ದೂರದಿಂದ ತಾಗಿದರೆ ಅಪಾಯ ಇಲ್ಲ. ಆದರೆ, ಹತ್ತಿರದಿಂದ ಬಡಿದರೆ, ದೇಹದ ಒಳಕ್ಕೆ ಸೇರುವ ಅಪಾಯ ಇರುತ್ತದೆ. ಹೀಗಾಗಿ ಇವುಗಳನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.