ತಮ್ಮ ಪಕ್ಷದ ತತ್ವದ ಬಗ್ಗೆ ಸುಳಿವು ನೀಡಿದ ಅವರು, ತಮ್ಮದು ಎಡಪಂಥವೂ ಅಲ್ಲ, ಬಲಪಂಥವೂ ಅಲ್ಲ, ಮಧ್ಯಮ ಮಾರ್ಗ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ರಾಜಕೀಯ ಪಕ್ಷಕ್ಕಿಂತ ಮೊದಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡುವ ಸುಳಿವನ್ನೂ ಅವರು ನೀಡಿದ್ದಾರೆ.
ಚೆನ್ನೈ(ನ. 07): ಕಾಲಿವುಡ್ ಸೂಪರ್'ಸ್ಟಾರ್ ಕಮಲ್ ಹಾಸನ್ ಅವರ ಹೊಸ ಪಕ್ಷಕ್ಕಾಗಿ ಇನ್ನಷ್ಟು ದಿನ ಕಾಯಬೇಕಾಗಬಹುದು. ತಮ್ಮ 63ನೇ ಜನ್ಮದಿನದಂದು ಕಮಲ್ ಹಾಸನ್ ಹೊಸ ರಾಜಕೀಯ ಪಕ್ಷದ ಘೋಷಣೆ ಮಾಡುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ಸದ್ಯದಲ್ಲೇ ಸತ್ಯಾನ್ವೇಷಣೆಯ ಆ್ಯಪ್'ವೊಂದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ರಾಜಕೀಯ ಪಕ್ಷ ಆರಂಭಿಸುವ ಉದ್ದೇಶ ಹೊಂದಿದ್ದೇನೆಂಬುದನ್ನು ಹೇಳಲೆಂದಷ್ಟೇ ಪತ್ರಿಕಾಗೋಷ್ಠಿ ಕರೆದದ್ದು ಎಂದು ಕಮಲ್ ಹಾಸನ್ ಆರಂಭದಲ್ಲೇ ಸ್ಪಷ್ಟಪಡಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವುದಿಲ್ಲವಾ ಎಂಬ ಪ್ರಶ್ನೆಗೆ ಅವರು, ಮೊದಲು ನಾವು ಸಿದ್ದವಾಗಬೇಕು. ಆನಂತರವಷ್ಟೇ ರಾಜಕೀಯ ಪಕ್ಷ ಸ್ಥಾಪಿಸುವುದು ಮತ್ತು ಚುನಾವಣೆಗೆ ಸ್ಪರ್ಧಿಸುವುದು ಎಂದು ಹೇಳಿದ್ದಾರೆ. "ಏನೂ ತಯಾರಿ ಇಲ್ಲದೇ ಅಖಾಡಕ್ಕಿಳಿಯಲು ಸಾಧ್ಯವಿಲ್ಲ. ನಾವು ನಮ್ಮ ಪಕ್ಷದ ನೀತಿ ಮತ್ತು ಪ್ರಣಾಳಿಕೆಯನ್ನು ತಯಾರಿಸಬೇಕು. ಪಕ್ಷದ ರೂಪುರೇಷೆ ಸಿದ್ಧಪಡಿಸಬೇಕು. ಎಲ್ಲವೂ ಸಮರ್ಪಕವಾಗಿ ಕಂಡ ಮೇಲಷ್ಟೇ ನಾವು ಸಜ್ಜಾಗಿದ್ದೇವೆಂದು ಅರ್ಥ," ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
ತಮ್ಮ ಪಕ್ಷದ ತತ್ವದ ಬಗ್ಗೆ ಸುಳಿವು ನೀಡಿದ ಅವರು, ತಮ್ಮದು ಎಡಪಂಥವೂ ಅಲ್ಲ, ಬಲಪಂಥವೂ ಅಲ್ಲ, ಮಧ್ಯಮ ಮಾರ್ಗ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ರಾಜಕೀಯ ಪಕ್ಷಕ್ಕಿಂತ ಮೊದಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡುವ ಸುಳಿವನ್ನೂ ಅವರು ನೀಡಿದ್ದಾರೆ. ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಶಕ್ತಿ ನೀಡುವ ಆ್ಯಪ್'ವೊಂದನ್ನು ಕಮಲ್ ಬಿಡುಗಡೆ ಮಾಡಲಿದ್ದಾರೆ. ಈ ಆ್ಯಪ್ ಬಹುತೇಕ ಸಿದ್ಧಗೊಂಡಿದ್ದು ಬೀಟಾ ಟೆಸ್ಟಿಂಗ್ ಹಂತದಲ್ಲಿದೆ. ಜನವರಿಯಲ್ಲಿ ಆ್ಯಪ್ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅವರ ಆ ಆ್ಯಪ್ ಮೂಲಕ ಜನರು ತಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದು, ಭ್ರಷ್ಟಾಚಾರ ಸೇರಿದಂತೆ ಎಲ್ಲೇ ಏನೇ ತಪ್ಪು ನಡೆದರೂ ದೂರು ನೀಡುವ ಅವಕಾಶ ಹೊಂದಿರಲಿದ್ದಾರೆ.
