ಮದುರೈ: ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದು ಎಂದು ತಾವು ನೀಡಿದ್ದ ವಿವಾದಿತ ಹೇಳಿಕೆಯನ್ನು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸ್ಥಾಪಕ ಕಮಲ್ ಹಾಸನ್ ಬುಧವಾರ ಸಮರ್ಥಿಸಿಕೊಂಡಿ ದ್ದಾರೆ. ‘ನಾನು ಗೋಡ್ಸೆ ಕುರಿತು ಐತಿಹಾಸಿಕ ಸತ್ಯವನ್ನೇ ಹೇಳಿದ್ದೇನೆ ಎಂದರು. 

ಗೋಡ್ಸೆ ತೀವ್ರವಾದಿ ಎಂಬ ಅರ್ಥದಲ್ಲಿ ಪದ ಬಳಸಿದ್ದೇನೆ.  ಉಗ್ರ, ಕೊಲೆಗಡುಕ ಎಂದಿಲ್ಲ’ ಎಂದಿದ್ದಾರೆ. 

ಇದೇ ವೇಳೆ ಹೇಳಿಕೆ ಸಂಬಂಧ ದಾಖಲಾದ ಎಫ್‌ಐಆರ್ ರದ್ದು ಕೋರಿ ಕಮಲ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಹೀಗಾಗಿ ಅವರು ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮೊದಲ ಉಗ್ರ ಹಿಂದು ಎಂದ ಕಮಲ್‌ ಮೇಲೆ ಚಪ್ಪಲಿ ಎಸೆತ

ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದು ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ನಟ ಹಾಗೂ ಮಕ್ಕಳ್‌ ನೀಧಿ ಮಯ್ಯಂ ಪಕ್ಷದ ಸ್ಥಾಪಕ ಕಮಲ್‌ ಹಾಸನ್‌ ಅವರ ಮೇಲೆ ಚಪ್ಪಲಿ ಎಸೆಯಲು ಯತ್ನಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಅದೃಷ್ಟವಶಾತ್‌ ಚಪ್ಪಲಿ ಅವರಿಗೆ ತಗುಲಿಲ್ಲ.

ತಮಿಳುನಾಡಿನ ತಿರಪ್ಪರಂಕುಂಡ್ರಂ ವಿಧಾನಸಭಾ ಕ್ಷೇತ್ರದಲ್ಲಿ ಕಮಲ್‌ಹಾಸನ್‌ ತೆರೆದ ವಾಹನದಲ್ಲಿ ನಿಂತು ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ವ್ಯಕ್ತಿಯೊಬ್ಬ ದೂರದಿಂದ ಕಮಲ್‌ರತ್ತ ಚಪ್ಪಲಿ ಎಸೆದಿದ್ದಾನೆ. ಆದರೆ ಚಪ್ಪಲಿ, ಕಮಲ್‌ ಹಾಸನ್‌ ಅವರಿಗೆ ತಗುಲದೇ ಜನರ ಮಧ್ಯದಲ್ಲಿ ಬಿದ್ದಿದೆ. ತಕ್ಷಣವೇ ಚಪ್ಪಲಿ ಎಸೆದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್‌ ಗೊಡ್ಸೆಯನ್ನು ಉದ್ದೇಶಿಸಿ, ದೇಶದ ಮೊದಲ ಉಗ್ರಗಾಮಿ ಹಿಂದು ಎಂದು ಹೇಳಿಕೆ ನೀಡಿದ ಕಾರಣಕ್ಕೆ ಕಮಲ್‌ ಹಾಸನ್‌ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು.