ನವದೆಹಲಿ(ಜ.24): ಎಂ ನಾಗೇಶ್ವರ ರಾವ್ ಅವರನ್ನು ಸಿಬಿಐಯ ಮಧ್ಯಂತರ ನಿರ್ದೇಶಕರಾಗಿ ನೇಮಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕೆ ಸಿಕ್ರಿ ಹಿಂದೆ ಸರಿದಿದ್ದಾರೆ.

ಸುಪ್ರೀಂ ಕೋರ್ಟ್ ಮುಂದೆ ಇಂದು ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ, ಹಿರಿಯ ನ್ಯಾಯವಾದಿ ದುಶ್ಯಂತ್ ದಾವೆಗೆ ಈ ಪ್ರಕರಣದ ವಿಚಾರಣೆಯನ್ನು ತಾವು ನಡೆಸುವುದಿಲ್ಲ ಎಂದು ಸಿಕ್ರಿ ತಿಳಿಸಿದರು. 

ನ್ಯಾಯಮೂರ್ತಿ ಸಿಕ್ರಿಯವರ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರೇತರ ಸಂಘಟನೆ ಪರ ವಕೀಲ ದುಶ್ಯಂತ್ ದಾವೆ, ವಿಚಾರಣೆಯಿಂದ ಹಿಂದೆ ಸರಿಯುವುದಿದ್ದರೆ ಈ ಹಿಂದೆಯೇ ಹಿಂದೆಯೇ ಸರಿಯಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಿರುವ ಉನ್ನತ ಮಟ್ಟದ ತಂಡದಲ್ಲಿ ನ್ಯಾಯಮೂರ್ತಿ ಸಿಕ್ರಿ ಕೂಡ ಇದ್ದರು.

ಇನ್ನು ಇದೇ ಅರ್ಜಿಯ ವಿಚಾರಣೆಯಿಂದ ಕಳೆದ ಸೋಮವಾರವಷ್ಟೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಿಂದೆ ಸರಿದಿದ್ದದ್ದನ್ನು ಇಲ್ಲಿ ಸ್ಮರಿಸಬಹುದು.