ಧಾಬೋಲ್ಕರ್, ಪಾನ್ಸರೆ, ಕಲಬುರ್ಗಿ, ಗೌರಿ ಲಂಕೇಶ್ ತಾಯಂದಿರೆಲ್ಲ ಗುಜರಾತ್'ನಲ್ಲಿರುವ ಮೋದಿ ತಾಯಿಯ ಬಳಿ ತೆರಳಬೇಕು, ಮೋದಿಯಂತಹ ವ್ಯಕ್ತಿಗೇಕೆ ಜನ್ಮ ಕೊಟ್ಟಿರಿ ಎಂದು ಪ್ರಶ್ನಿಸಬೇಕು. ತಾಯಿಯೇ ಮೋದಿಗೆ ಬುದ್ಧಿ ಹೇಳುವಂತೆ ಮಾಡಬೇಕು ಎಂದು ಹೋರಾಟಗಾರ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಬೆಂಗಳೂರು(ಸೆ.13): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ನ್ಯಾಯ ಕೇಳಲು ದೇಶದ ಎಲ್ಲ ಪ್ರಗತಿಪರರು ಶೀಘ್ರವೇ ದೆಹಲಿಗೆ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎದೆ ಮೇಲೆ ಕುಳಿತು ನ್ಯಾಯ ಕೇಳೋಣ ಎಂದು ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ಹೇಳಿದ್ದಾರೆ. ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯು ದೇಶದ ವಿವಿಧ 135ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಸಹಯೋಗದಲ್ಲಿ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪ್ರತಿರೋಧ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಿಂತಕ ಎಂ.ಎಂ.ಕಲಬುರ್ಗಿ ಹಂತಕರನ್ನು ಪ್ರಶ್ನಿಸಿದ ಕಾರಣಕ್ಕೆ ಗೌರಿ ಲಂಕೇಶ್ ಕೊಲೆಯಾಗಿದೆ. ಈಕೆಯ ಹತ್ಯೆಗೆ ಪ್ರತಿಯಾಗಿ ಈಗ ಹೋರಾಟ ಬೆಂಗಳೂರಿನಿಂದ ಆರಂಭವಾಗಿದೆ. ಆದರೆ ಈ ಹೋರಾಟ ಇಲ್ಲಿಗೆ ನಿಲ್ಲದು. ನಾವೆಲ್ಲರು ದೆಹಲಿಗೆ ಹೊರಡೋಣ. ಮೋಹನ್ ಭಾಗವತ್ ಮತ್ತು ಮೋದಿಯ ಎದೆಯ ಮೇಲೆ ಕುಳಿತು ನ್ಯಾಯ ಕೇಳೋಣ. ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಡೆಸೋಣ ಎಂದು ಹೇಳಿದರು. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಕೊಲೆಗಳು ಈಗ ಆರಂಭವಾಗಿವೆ. ಇವತ್ತು ಗೌರಿ ನಾಳೆ ಯಾರು ಎಂಬ ಪ್ರಶ್ನೆ ಮೂಡುತ್ತಿದೆ. ಆದರೆ ಒಬ್ಬ ಗೌರಿಯನ್ನು ಕೊಂದರೆ ಲಕ್ಷ ಗೌರಿ ಹುಟ್ಟಿಕೊಳ್ಳುತ್ತಾರೆ. ಧಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಹಾಗೂ ಗೌರಿ ಲಂಕೇಶ್ ತಾಯಂದಿರೆಲ್ಲ ಸೇರಿ ಗುಜರಾತ್'ನ ಗಾಂಧಿನಗರದಲ್ಲಿರುವ ಮೋದಿ ತಾಯಿಯ ಬಳಿ ತೆರಳಬೇಕು, ಮೋದಿ ತಾಯಿ ಬಳಿ ನಿನ್ನ ಮಗ ಮೋದಿಯಂತಹ ನಾಲಾಯಕ್'ಗೆ ಏಕೆ ಜನ್ಮ ಕೊಟ್ಟಿರಿ ಎಂದು ಪ್ರಶ್ನಿಸಬೇಕು. ಆ ಮೂಲಕ ಮೋದಿ ತಾಯಿಯೇ ಮೋದಿ ಕರೆದು ಬುದ್ಧಿ ಹೇಳಬೇಕು. ಏಕೆಂದರೆ ಮೋದಿಯಿಂದ ಪ್ರಜಾಸತ್ತೆಗೆ ಧಕ್ಕೆಯಾಗುತ್ತಿದೆ. ಮೋದಿಯಿಂದ ದೇಶದ ಐಕ್ಯತೆಗೆ ಭಂಗವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಲಬುರ್ಗಿಯನ್ನು ಕೊಂದವರು ಎಲ್ಲಿ ಎಂದು ಗೌರಿ ಪ್ರಶ್ನಿಸಿದ್ದೇ ತಪ್ಪು ಎಂಬ ಕಾರಣಕ್ಕಾಗಿ ಆಕೆಯನ್ನು ಕೊಲ್ಲಲಾಗಿದೆ. ಆಕೆಯ ಪ್ರಶ್ನೆಗೆ ಉತ್ತರ ನೀಡಲಾಗದ ಕೇಂದ್ರ ಸರ್ಕಾರ ಹಂತಕರಿಗೆ ನೆರಳಾಗಿದೆ. ಕರ್ನಾಟಕ ಸರ್ಕಾರಕ್ಕೂ ನನ್ನ ನೇರ ಪ್ರಶ್ನೆ ಏನೆಂದರೆ ಕಲಬುರ್ಗಿ ಹಾಗೂ ಗೌರಿ ಹಂತಕರನ್ನು ಕಂಡುಹಿಡಿಯಿರಿ. ಕಲಬುರ್ಗಿ ಹಂತಕರನ್ನು ಹಿಡಿದಿದ್ದರೆ ಗೌರಿ ಕೊಲೆ ಆಗುತ್ತಿರಲಿಲ್ಲ. ಇನ್ನು ಮುಂದಾದರೂ ಇಂತಹ ಪ್ರಮಾದ ನಡೆಯಬಾರದು. ಕರ್ನಾಟಕ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಕೇರಳ, ತಮಿಳುನಾಡು ಮತ್ತಿತರ ಬಿಜೆಪಿಯೇತರ ರಾಜ್ಯಗಳಲ್ಲಿ ಬಿಜೆಪಿ ತನ್ನ ಅಧಿಕಾರ ಸ್ಥಾಪಿಸಲು ಹವಣಿಸುತ್ತಿದೆ ಎಂದರು.
