ಶಾಸಕ ಆರ್.ವಿ. ದೇಶಪಾಂಡೆ ಅವರ ಪ್ರಯತ್ನದ ಫಲವಾಗಿ, ಅಳ್ನಾವರ-ದಾಂಡೇಲಿ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಈ ಹಿಂದೆ ಭಾನುವಾರ ರಜೆ ಇರುತ್ತಿದ್ದ ರೈಲು ಇನ್ನು ಮುಂದೆ ಗುರುವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಬೆಳಗಿನ ಮತ್ತು ಸಂಜೆಯ ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಕಾರವಾರ: ಕಳೆದ ತಿಂಗಳ ಫೆ.7ರಂದು ಪುನಾರಂಭಗೊಂಡ ಅಳ್ನಾವರ-ದಾಂಡೇಲಿ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮೋಹನ ಹಲವಾಯಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಸ್ಥಳೀಯರು ರೈಲು ವೇಳಾಪಟ್ಟಿಯು ಸರಿಯಾಗಿಲ್ಲ ಎಂದು ಮನವಿ ಸಲ್ಲಿಸಿದ್ದರು. ರೈಲ್ವೆ ಪುನಾರಂಭ ಕಾರ್ಯಕ್ರಮದ ವೇದಿಕೆಯಲ್ಲಿ ಈ ಕುರಿತು ದೇಶಪಾಂಡೆ ಮಾತನಾಡಿದ್ದರು. ಲಿಖಿತ ಮನವಿ ನೀಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಿದೆ ಎಂದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷ ಬಶೀರ ಗಿರಿಯಾಳ, ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಪ್ರಮುಖರಾದ ಯಾಸ್ಮೀನ್ ಕಿತ್ತೂರ, ಅನಿಲ ನಾಯ್ಕರ, ದಿವಾಕರ ನಾಯ್ಕ, ತಸ್ವರ ಸೌದಾಗರ, ಆರ್.ಪಿ. ನಾಯ್ಕ, ರವಿಕುಮಾರ ಚವ್ಹಾಣ, ರಫೀಕ್, ರಾಮಲಿಂಗ ಜಾಧವ, ದಾದಾಪಿರ ನದಿಮುಲ್ಲಾ, ಆಫ್ರೀನ್ ಕಿತ್ತೂರ ಇದ್ದರು.
ಅಳ್ನಾವರ-ದಾಂಡೇಲಿ ರೈಲಿನ ಸಮಯ ಬದಲಾವಣೆ
ದಾಂಡೇಲಿ ರೈಲು ಪುನಾರಂಭದ ಉದ್ಘಾಟನಾ ಕಾರ್ಯಕ್ರಮದ ಸಂದರ್ಭ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ನೀಡಿದ ಭರವಸೆಯಂತೆ ಅಳ್ನಾವರ ಮತ್ತು ದಾಂಡೇಲಿ ನಡುವೆ ಸಂಚರಿಸುವ ಮೂರು ಜೋಡಿ ಡೆಮು (DEMU) ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ಆದೇಶದಂತೆ, ಈ ಹಿಂದೆ ಭಾನುವಾರ ರಜೆ ಇರುತ್ತಿದ್ದ ಈ ರೈಲುಗಳು ಇನ್ನು ಮುಂದೆ ಗುರುವಾರ ಹೊರತುಪಡಿಸಿ ವಾರದ ಉಳಿದ ಆರು ದಿನಗಳ ಕಾಲ ಸಂಚರಿಸಲಿವೆ.
ಬದಲಾದ ಸಮಯ ಈ ರೀತಿಯಾಗಿದೆ
ಸಮಯದ ಬದಲಾವಣೆಯಂತೆ, ರೈಲು ಸಂಖ್ಯೆ 76501 ಅಳ್ನಾವರದಿಂದ ಬೆಳಗ್ಗೆ 5ಕ್ಕೆ ಹೊರಟು 5.45ಕ್ಕೆ ದಾಂಡೇಲಿ ತಲುಪಲಿದೆ ಮತ್ತು ರೈಲು ಸಂಖ್ಯೆ 76502 ದಾಂಡೇಲಿಯಿಂದ ಬೆಳಗ್ಗೆ 06.15ಕ್ಕೆ ಹೊರಟು 7ಕ್ಕೆ ಅಳ್ನಾವರ ತಲುಪಲಿದೆ. ರೈಲು ಸಂಖ್ಯೆ 76503 ಅಳ್ನಾವರದಿಂದ ಬೆಳಗ್ಗೆ 7.35ಕ್ಕೆ ಹೊರಟು 8.20ಕ್ಕೆ ದಾಂಡೇಲಿ ತಲುಪಲಿದ್ದು, ಮಧ್ಯಾಹ್ನದ ರೈಲು ಸಂಖ್ಯೆ 76504ರ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅದೇ ರೀತಿ ಸಂಜೆಯ ರೈಲು ಸಂಖ್ಯೆ 76505 ಅಳ್ನಾವರದಿಂದ 18ಕ್ಕೆ ಹೊರಟು 18.45ಕ್ಕೆ ದಾಂಡೇಲಿ ತಲುಪಲಿದ್ದು, ಮರಳಿ ಬರುವ ರೈಲು ಸಂಖ್ಯೆ 76506 ದಾಂಡೇಲಿಯಿಂದ 19:05 ಕ್ಕೆ ಹೊರಟು 19:50 ಕ್ಕೆ ಅಳ್ನಾವರ ತಲುಪಲಿದೆ.
ಇದನ್ನೂ ಓದಿ: E-Khata ಲಂಚ ಆರೋಪ: ದಾಖಲೆ ಕೊಟ್ಟರೆ ಅಧಿಕಾರಿ ವಿರುದ್ಧ ಕ್ರಮ: ಡಿ.ಕೆ.ಶಿವಕುಮಾರ್
ಇದನ್ನೂ ಓದಿ: ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್ ಸೂಚನೆ


