ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಏರದಂತೆ ತಡೆಯಬೇಕು ಎಂದಿದ್ದ ಜನಾರ್ದನ ರೆಡ್ಡಿ ಜೆಡಿಎಸ್ ಜತೆ ಕೈ ಜೋಡಿಸುವ ಸಂಭವವಿದ್ದು, ಪಕ್ಷದ ಉತ್ತರ ಕರ್ನಾಟಕದ ಜವಾಬ್ದಾರಿ ತೆಗೆದುಕೊಳ್ಳುವ ನಿರೀಕ್ಷೆಯೂ ಇದೆ ಎನ್ನಲಾಗಿದೆ.
ಬೆಂಗಳೂರು:ಜನಾರ್ದನ ರೆಡ್ಡಿಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಅಮಿತ್ ಶಾ ಶನಿವಾರ ಹೇಳಿಕೆ ನೀಡಿದ ಬೆನ್ನಲ್ಲೇ ಅಚ್ಚರಿಯ ರಾಜಕೀಯವಿದ್ಯಮಾನವೊಂದು ಜರುಗಿದೆ.
ಶಾ ಹೇಳಿಕೆಯಿಂದ ವಿಚಲಿತರಾಗಿದ್ದಾರೆ ಎನ್ನಲಾಗಿರುವ ಬಿಜೆಪಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ,ತಮ್ಮ ಬದ್ಧ ರಾಜಕೀಯ ವೈರಿಯೂ ಆಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾತ್ರೋರಾತ್ರಿ ಭೇಟಿಯಾಗಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ ಕಾಂಗ್ರೆಸ್ ಸೋಲಿಸುವುದಕ್ಕಾಗಿ ಎಲ್ಲ ರೀತಿಯ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡಲು ಅವಕಾಶ ಕೊಡಿ ಎಂಬ ಬೇಡಿಕೆ ಇಟ್ಟಿದ್ದ ಜನಾರ್ದನ ರೆಡ್ಡಿ ಅವರು ಕುಮಾರಸ್ವಾಮಿ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದು, ಶೀಘ್ರದಲ್ಲೇ ತಮ್ಮ ಮುಂದಿನ ರಾಜಕೀಯ ನಿಲುವು ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಏರದಂತೆ ತಡೆಯಬೇಕು ಎಂದಿದ್ದ ಜನಾರ್ದನ ರೆಡ್ಡಿ ಜೆಡಿಎಸ್ ಜತೆ ಕೈ ಜೋಡಿಸುವ ಸಂಭವವಿದ್ದು, ಪಕ್ಷದ ಉತ್ತರ ಕರ್ನಾಟಕದ ಜವಾಬ್ದಾರಿ ತೆಗೆದುಕೊಳ್ಳುವ ನಿರೀಕ್ಷೆಯೂ ಇದೆ ಎನ್ನಲಾಗಿದೆ. ಒಂದು ಕಾಲದಲ್ಲಿ ಹಾವು-ಮುಂಗುಸಿಯಂತಿದ್ದ ಜನಾರ್ದನ ರೆಡ್ಡಿ ಮತ್ತು ಕುಮಾರಸ್ವಾಮಿ ಅವರು ಕಳೆದ ಕೆಲವು ಸಮಯದಿಂದ ಮೊದಲಿನ ದ್ವೇಷದ ರಾಜಕಾರಣ ಬದಿಗಿರಿಸಿ ತುಸು ಸ್ನೇಹದ ಹಸ್ತ ಚಾಚಿದ್ದರು. ಅದೀಗ ಮುಂದುವರೆಯುವ ಸಾಧ್ಯತೆ ಕಂಡು ಬಂದಿದ್ದು, ರೆಡ್ಡಿ ಅವರು ಚುನಾವಣೆಯಲ್ಲಿ ಜೆಡಿಎಸ್ ಪರ ಬ್ಯಾಟಿಂಗ್ ಬೀಸುವ ಸಾಧ್ಯತೆಯಿದೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.
ಮಧ್ಯ ಹಾಗೂ ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲಿನ ಐದಾರು ಜಿಲ್ಲೆಗಳ ಹೊಣೆ ಹೊತ್ತುಕೊಂಡು ಆರ್ಥಿಕ ನೆರವೂ ಸೇರಿದಂತೆ ಎಲ್ಲ ರೀತಿಯ ಶ್ರಮ ವ್ಯಯಿಸುವುದಾಗಿ ಜನಾರ್ದನರೆಡ್ಡಿ ಅವರು ಜತೆಗೆ ತಮಗೆ ವಿಧಾನಸಭಾ ಟಿಕೆಟ್ ನೀಡುವುದೂ ಬೇಡ.ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದೇ ತಮ್ಮ ಗುರಿ ಎಂದೂ ಅವರು ವರಿಷ್ಠರಿಗೆ ಮಾಹಿತಿ ನೀಡಿದ್ದರು. ಇಷ್ಟಾದರೂ ತಮ್ಮ ವರ್ಚಸ್ಸಿಗೆ ಧಕ್ಕೆ ತರುವಂಥ ಹಾಗೂ ಅವಮಾನ ಮಾಡುವಂಥ ಹೇಳಿಕೆ ಅಮಿತ್ ಶಾ ಅವರಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ರೆಡ್ಡಿ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜನಾರ್ದನ ರೆಡ್ಡಿ ಅವರ ಈ ನಡೆ ಬಿಜೆಪಿಗೆ ನಷ್ಟ ಉಂಟುಮಾಡುವ ಸಾಧ್ಯತೆಯಿದ್ದು, ಅಧಿಕಾರದ ಗದ್ದುಗೆ ಏರುವ ಸನ್ನಾಹದಲ್ಲಿರುವ ಜೆಡಿಎಸ್ ಈ ಬೆಳವಣಿಗೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಯಸಿದ್ದಾರೆ. ರೆಡ್ಡಿ ಕೇಳುವ ಜಿಲ್ಲೆಗಳ ಉಸ್ತುವಾರಿ ನೀಡುವುದರ ಜತೆಗೆ ಆ ಭಾಗದ ಟಿಕೆಟ್ ಆಯ್ಕೆಯಲ್ಲೂ ಅವರಿಗೆ ಹೆಚ್ಚಿನ ಅಧಿಕಾರ ನೀಡಲು ಸಮ್ಮತಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಅಂದ ಹಾಗೆ, ಇದು ನಿಜವಾಗಿಯೂ ನಡೆದ ವಿದ್ಯಮಾನವೇನಲ್ಲ. ಭಾನುವಾರ, ಅಂದರೆ ಇಂದು ವಿಶ್ವ ಮೂರ್ಖರ ದಿನ. ‘ಏಪ್ರಿಲ್ ಫೂಲ್’ ಅಂಗವಾಗಿ ಸಿದ್ಧಪಡಿಸಲಾಗಿರುವ ವರದಿ ಇದು. ಆದರೆ,ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಹಾಗಾಗಿ, ಮುಂದಿನ ದಿನಗಳಲ್ಲಿ ಬದ್ಧವೈರಿಗಳು ನಿಜವಾಗಿಯೂ ಭೇಟಿಯಾದರೆ, ಅವರ ನಡುವೆ ಹೊಂದಾಣಿಕೆ ನಡೆದರೆ, ಕನ್ನಡಪ್ರಭ ಹೊಣೆಯಲ್ಲ!
(ವಿ.ಸೂ.: ಮುಖಪುಟದಲ್ಲಿ ಬಳಸಲಾಗಿರುವ ಚಿತ್ರ ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿದ್ದು, ಪ್ರಾತಿನಿಧಿಕವಾಗಿ ಬಳಸಲಾಗಿದೆ.)
