ಆಗಸ್ಟ್‌ನಲ್ಲಿ ಜೆಡಿಎಸ್‌ನಿಂದ 2000 ಕಿಮೀ ಪಾದಯಾತ್ರೆ!
ಆಗಸ್ಟ್‌ನಲ್ಲಿ ಜೆಡಿಎಸ್‌ನಿಂದ 2000 ಕಿಮೀ ಪಾದಯಾತ್ರೆ! 2 ಹಂತದಲ್ಲಿ ರಾಜ್ಯ ಸಂಚಾರ: ವೈಎಸ್‌ವಿ ದತ್ತ | ಕಾವೇರಿಯಿಂದ ತುಂಗಭದ್ರೆ, ಮಲಪ್ರಭಾವರೆಗೆ 2 ಹಂತದಲ್ಲಿ ನಡಿಗೆ | ಪಕ್ಷ ಸಂಘಟನೆಗೆ ಭಾವಸ್ಪರ್ಶಿ, ತಲಸ್ಪರ್ಶಿ, ಬಹುಸ್ಪರ್ಶಿ ತಂತ್ರ
ಬೆಂಗಳೂರು (ಜೂ.22): ಪಕ್ಷ ಸಂಘಟನೆ ಉದ್ದೇಶದಿಂದ ಬರುವ ಆಗಸ್ಟ್ ತಿಂಗಳಲ್ಲಿ ಎರಡು ಹಂತದಲ್ಲಿ ರಾಜ್ಯವ್ಯಾಪಿ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ತಿಳಿಸಿದ್ದಾರೆ.
ಅಲ್ಲದೆ ಭಾವಸ್ಪರ್ಶಿ, ತಲಸ್ಪರ್ಶಿ ಹಾಗೂ ಬಹುಸ್ಪರ್ಶಿ ಎಂಬ ಮೂರು ತಂತ್ರಗಳ ಆಧಾರದ ಮೇಲೆ ಪಕ್ಷವನ್ನು ಸಂಘಟನೆ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ.
ಪಕ್ಷದ ಸೋತ ಅಭ್ಯರ್ಥಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಗಸ್ಟ್ ತಿಂಗಳಿನಲ್ಲಿ ಎರಡು ಹಂತದಲ್ಲಿ ಪಾದಯಾತ್ರೆ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಕಾವೇರಿಯಿಂದ ತುಂಗಭದ್ರಾವರೆಗೆ ಮತ್ತು ಎರಡನೇ ಹಂತದಲ್ಲಿ ತುಂಗಭದ್ರೆಯಿಂದ ಮಲಪ್ರಭಾದವರೆಗೆ ಪಾದಯಾತ್ರೆ ನಡೆಸಲಾಗುವುದು. ಸುಮಾರು ಎರಡು ಸಾವಿರ ಕಿ.ಮೀ.ಗಳಷ್ಟುಪಾದಯಾತ್ರೆ ಮೂಲಕ ಜನರನ್ನು ತಲುಪುವ ಕೆಲಸ ಮಾಡಲಾಗುವುದು ಎಂದರು.
ಸಾಮಾಜಿಕ ಜಾಲತಾಣದ ಮಾಧ್ಯಮವನ್ನು ಮತ್ತಷ್ಟುಬಲಗೊಳಿಸುವ ಮೂಲಕ ‘ಭಾವಸ್ಪರ್ಶಿ’ ತಂತ್ರದ ಮೂಲಕ ಪಕ್ಷವನ್ನು ಗಟ್ಟಿಗೊಳಿಸಿದರೆ, ಪಕ್ಷದ ಚರಿತ್ರೆ, ಸರ್ಕಾರದ ಇತಿಹಾಸ, ಸಾಧನೆಯನ್ನು ಜನರಿಗೆ ತಲುಪಿಸಿ ಪಕ್ಷ ಸಂಘಟನೆ ಮಾಡುವುದು ‘ತಲಸ್ಪರ್ಶಿ’ ತಂತ್ರವಾಗಿದೆ. ಪಕ್ಷದ ಸಂಘಟನೆಗಾಗಿ ಪಾದಯಾತ್ರೆ ಮಾಡುವುದು ‘ಬಹುಸ್ಪರ್ಶಿ’ ತಂತ್ರವಾಗಿದೆ.
ಪಕ್ಷದ ವರಿಷ್ಠ ದೇವೇಗೌಡರು ಸೋಲಿನಿಂದ ಯಾವತ್ತೂ ಧೃತಿಗೆಟ್ಟಿಲ್ಲ. ಈ ಹಿಂದೆಯೂ ಪಕ್ಷವು 1989ರಲ್ಲಿ ನೆಲಕಚ್ಚಿತ್ತು. ಆಗಲೂ ತಳಮಟ್ಟದಿಂದ ಪಕ್ಷವನ್ನು ಬಲಗೊಳಿಸಿದ್ದರು. ದೇವೇಗೌಡರು ಯಾವಾಗ ಯಾವ ಪಾನ್ ಹೊಡೆಯುತ್ತಾರೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಆದರೆ, ಅದು ಎದುರಾಳಿಗಳನ್ನು ಫಜೀತಿಗೆ ಸಿಲುಕಿಸುತ್ತದೆ ಎಂದು ದತ್ತ ಹೇಳಿದರು.
ಪಕ್ಷದ ಸಂಘಟನೆಯನ್ನು ಮೂರು ತಂತ್ರದಲ್ಲಿ ಮಾಡಬೇಕು. ಭಾವಸ್ಪರ್ಶಿ ತಂತ್ರ, ತಲಸ್ಪರ್ಶಿ ತಂತ್ರ ಮತ್ತು ಬಹುಸ್ಪರ್ಶಿ ತಂತ್ರದ ಮೂಲಕ ಪಕ್ಷವನ್ನು ಬಲಗೊಳಿಸಬೇಕು ಎಂದು ಅವರು ಮುಖಂಡರಿಗೆ ಸಲಹೆ ನೀಡಿದರು.