ಬೆಂಗಳೂರು, (ಜೂ.27): ಹಲವು ದಿನಗಳಿಂದ ಖಾಲಿ ಉಳಿದಿದ್ದ ಜೆಡಿಎಸ್‌ ರಾಜ್ಯ ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಕೊನೆಗೂ ನಾಮನಿರ್ದೇಶನವಾಗಿದೆ.

ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಅವರನ್ನು ಜೆಡಿಎಸ್‌ ರಾಜ್ಯ ಮಹಿಳಾ ಘಟಕ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಇಂದು (ಗುರುವಾರ) ವರಿಷ್ಠ ಎಚ್‌.ಡಿ ದೇವೇಗೌಡರು ಆದೇಶ ಹೊರಡಿಸಿದ್ದಾರೆ.

ಲೀಲಾದೇವಿ ಪ್ರಸಾದ್, 1957ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಸಾಮಾಜಿಕ ರಾಜಕೀಯ ಬದುಕನ್ನು ಪ್ರಾರಂಭಿಸಿದ್ದರು. ಅಥಣಿ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ, ಎಸ್. ಆರ್. ಬೊಮ್ಮಾಯಿ, ಹೆಚ್. ಡಿ. ದೇವೇಗೌಡ ಹಾಗೂ ಜೆ. ಎಚ್. ಪಟೇಲ್ ಅವರ ಸಂಪುಟದಲ್ಲಿ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನ ಸೇವೆ, ವಾರ್ತಾ, ಕನ್ನಡ ಸಂಸ್ಕೃತಿ, ಸಣ್ಣ ನೀರಾವರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ರಾಜ್ಯ ಜೆಡಿಎಸ್ ಚುಕ್ಕಾಣಿ ಯಾರಿಗೆ ? ಇನ್ನೆರಡು ದಿನದಲ್ಲಿ ನೇಮಕ

ಇದೇ ವೇಳೆ ಬೆಂಗಳೂರು ನಗರದ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ರುತ್ ಮನೋರಮಾ ಅವರ ಹೆಸರನ್ನು ನಾಮನಿರ್ದೇಶ ಮಾಡಲಾಗಿದೆ.  ಇನ್ನೂ ಎಚ್.ವಿಶ್ವನಾಥ್ ರಾಜೀನಾಮೆಯಿಂದ ತೆರವಾಗಿರುವ ಜೆಡಿಎಸ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರು ಎನ್ನುವುದು ಮಾತ್ರ ಭಾರೀ ಕುತೂಹಲ ಮೂಡಿಸಿದೆ.

ಎರಡ್ಮೂರು ದಿನಗಳಲ್ಲಿ ರಾಜ್ಯಾಧ್ಯಕ್ಷರನ್ನ ನೇಮಕ ಮಾಡುವುದಾಗಿ ಇತ್ತೀಚೆಗಷ್ಟೇ ದೇವೇಗೌಡ್ರು ಹೇಳಿದ್ದರು. ಅದು ಪರಿಶಿಷ್ಟ ಸಮುದಾಯಕ್ಕೆ ಸೇರಿದವರನ್ನು ಪಕ್ಷದ ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ಸುಳಿವು ಸಹ ಕೊಟ್ಟಿದ್ದರು.

ಪಕ್ಷದ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಎಚ್‌.ಕೆ.ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವುದು ಬಹುತೇಕ ಖಚಿತವಾಗಿದೆ ಎಂದು ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ.

ದೇವೇಗೌಡ್ರು ಹೇಳಿರುವಂತೆ ಇನ್ನೆರಡು ದಿನಗಳಲ್ಲಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ.