Asianet Suvarna News Asianet Suvarna News

ಕಾಂಗ್ರೆಸ್‌ಗೆ ತಾನು ಬೇಕೇಬೇಕೆಂದು ಜೆಡಿಎಸ್ ದಿಲ್ ಖುಷ್ !

ಲೋಕಸಭೆಯಲ್ಲಿ ಮೋದಿ ಎದುರಿಸಲು ಕಾಂಗ್ರೆಸ್‌ಗೆ ಜೆಡಿಎಸ್ ಅನಿವಾರ್ಯ | ಸ್ಥಳೀಯ ಚುನಾವಣೆಯಲ್ಲಿ ಸ್ಪಷ್ಟ ಸಂದೇಶ | ಉಳ್ಳಾಲ ಪುರಸಭೇಯಲ್ಲಿ ಜೆಡಿಎಸ್ ಖಾತೆ 

JDS Support is need to Congress to face Loksabha Election 2019
Author
Bengaluru, First Published Sep 4, 2018, 8:00 AM IST

ಬೆಂಗಳೂರು (ಸೆ. 04):  ಸಾಂಪ್ರದಾಯಿಕ ಹಳೆ ಮೈಸೂರು ಪ್ರಾಂತ್ಯದಲ್ಲಿ ಸ್ಥಳೀಯ ಆಡಳಿತದಲ್ಲೂ ತನ್ನ ಭದ್ರಕೋಟೆಗೆ ಬಿರುಕು ಮೂಡದಂತೆ ಕಾದುಕೊಂಡಿರುವ ಜೆಡಿಎಸ್‌, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಕಾಂಗ್ರೆಸ್‌ಗೆ ತಾನು ಅನಿರ್ವಾಯ ಎಂಬ ಸ್ಪಷ್ಟಸಂದೇಶ ರವಾನಿಸಿದೆ.

ಜೆಡಿಎಸ್‌ ಕೇವಲ ಹಳೆ ಮೈಸೂರಿಗೆ ಸೀಮಿತ ಎಂಬ ಬಿಜೆಪಿಯ ಟೀಕೆಯ ನಡುವೆಯೇ ಜೆಡಿಎಸ್‌ ತನ್ನ ಪ್ರಾಂತ್ಯ ವಿಸ್ತರಣೆಗೂ ಮುಂದಾಗಿದೆ. ಬಜೆಟ್‌ ವಿಷಯದಲ್ಲಿ ಕರಾವಳಿಗರ ಕೋಪಕ್ಕೆ ತುತ್ತಾಗಿದ್ದ ದಳಪತಿಗಳು, ಇದೇ ಪ್ರಥಮ ಬಾರಿಗೆ ಉಳ್ಳಾಲ ಪುರಸಭೆಯಲ್ಲಿ ಖಾತೆ ತೆರೆದಿದ್ದಾರೆ. ಹಾಗೆ ಗುರುಮಿಠ್ಕಲ್‌ನಲ್ಲಿ ಸಹ ಸಮಾಧಾನಕರ ಸಾಧನೆ ಮಾಡಿದ್ದಾರೆ.

ಪ್ರಸಕ್ತ ಸ್ಥಳೀಯ ಸಂಸ್ಥೆಗಳ 2529 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ 1397 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಇದರಲ್ಲಿ 377 ವಾರ್ಡ್‌ಗಳಲ್ಲಿ ವಿಜಯ ಪಾತಕೆ ಹಾರಿಸಿದ ಪಕ್ಷವು, ಮೈತ್ರಿ ಪಕ್ಷದ ‘ಸ್ನೇಹ ಸಮರ’ದ ಹೊರತಾಗಿಯೂ 1/3 ಫಲಿತಾಂಶ ಪಡೆದು ಮಂದಹಾಸ ಬೀರಿದೆ.

ದಶಕದ ಹಿಂದೆ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಂದ ಫಲಿತಾಂಶವೇ ಬಹುತೇಕ ಮರುಕಳಿಸಿದ್ದು, ಅಂದಿನಂತೆ ಇಂದೂ ಸಹ ಸ್ಥಳೀಯ ಆಡಳಿತದಲ್ಲಿ ತೆನೆ ಹೊತ್ತ ಮಹಿಳೆ ಬುಟ್ಟಿಗೆ ಗೆಲುವಿನ ಗರಿಗಳು ಸೇರಿಕೊಂಡಿವೆ.

ಇನ್ನು ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಘಟಕದ ಭಿನ್ನಮತದ ಲಾಭ ಪಡೆದು ಹಾಸನದಲ್ಲಿ ಅರಳಿದ್ದ ಕಮಲವು, ಈಗ ನಗರಸಭೆಯಲ್ಲಿ ಚುನಾವಣೆಯಲ್ಲಿ ಮತ್ತಷ್ಟುಕಂಪು ಬೀರಿದೆ. ಆದರೆ ಸ್ಥಾನ ಗಳಿಕೆಯಲ್ಲಿ ಕಡಿಮೆಯಾದರೂ ಹಾಸನ ನಗರಸಭೆ ಅಧಿಕಾರದ ಚುಕ್ಕಾಣಿ ಜೆಡಿಎಸ್‌ ಪಾಲಾಗಿದೆ. ಅದೇ ರೀತಿ ಮಂಡ್ಯದಲ್ಲಿ ತನ್ನ ವಿರುದ್ಧ ಬಂಡೆದ್ದ ನಾಯಕ ಚೆಲುವರಾಯಸ್ವಾಮಿ ಅವರನ್ನು ಸ್ಥಳೀಯ ಆಡಳಿತದಲ್ಲೂ ದಳಪತಿಗಳು ಬಗ್ಗು ಬಡೆದಿದ್ದಾರೆ. ಹೀಗಿದ್ದರೂ ಚೆಲುವರಾಯಸ್ವಾಮಿ, ತಮ್ಮ ಸ್ವಕ್ಷೇತ್ರ ನಾಗಮಂಗಲದ ಬೆಳ್ಳೂರು ಪಟ್ಟಣ ಪಂಚಾಯಿತಿಯನ್ನು ಕೈವಶ ಮಾಡಿಕೊಂಡು ಜೆಡಿಎಸ್‌ಗೆ ಅಲ್ಪಮಟ್ಟಿಗೆ ತಿರುಗೇಟು ನೀಡಿದ್ದಾರೆ.

ಇದನ್ನು ಹೊರತುಪಡಿಸಿದರೆ ಹಾಸನದಲ್ಲಿ ಸಚಿವ ರೇವಣ್ಣ ಅಬ್ಬರ ಮುಂದುವರೆದಿದೆ. ಮಂಡ್ಯದಲ್ಲಿ ದೇವೇಗೌಡರ ಕುಟುಂಬಕ್ಕೆ ಮತ್ತಷ್ಟುಶಕ್ತಿ ಬಂದಿದೆ. ಹಿಂದಿನ ಸಾಲಿನಂತೆ ತುಮಕೂರು ಹಾಗೂ ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಮೈತ್ರಿ ಪಕ್ಷಗಳು ಆಡಳಿತ ನಡೆಸುವುದು ಸ್ಪಷ್ಟವಾಗಿದೆ.

ಹಳೆ ಮೈಸೂರು ಮಾತ್ರವಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ಗೆ ಜೆಡಿಎಸ್‌ ನೆರವಾಗಲಿದೆ ಎಂಬುದು ಚುನಾವಣೆ ಫಲಿತಾಂಶ ಪರೋಕ್ಷವಾಗಿ ಸಾರಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಜೆಡಿಎಸ್‌ ನಾಯಕರು ಶ್ರಮಿಸಿದರೆ ಕೈಗೆ ತೃಪ್ತಿದಾಯಕ ಮತಗಳು ಸಂದಾಯವಾಗಲಿದೆ.

Follow Us:
Download App:
  • android
  • ios