ಬೆಂಗಳೂರು[ಆ.08]: ಆಶ್ಲೇಷ ಮಳೆಯಬ್ಬರಕ್ಕೆ ಕರ್ನಾಟಕದ ಅರ್ಧಕ್ಕೂ ಹೆಚ್ಚು ಭಾಗ ಮುಳುಗಲಾರಂಭಿಸಿದೆ. ಸೂರು ಕಳೆದುಕೊಂಡ ಜನರು ಗಂಜಿ ಕೇಂದ್ರಕ್ಕೆ ಧಾವಿಸುತ್ತಿದ್ದಾರೆ. ಮನೆ, ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಲಾರಂಭಿಸಿವೆ. ಮೂಕ ಪ್ರಾಣಿಗಳು ವರುಣನ ಅಬ್ಬರಕ್ಕೆ ಬಲಿಯಾಗುತ್ತಿವೆ. ವರುಣನ ತಾಂಡವಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಹೀಗಿರುವಾಗ ಮಾಜಿ ಸಿಎಂ ಕುಮಾರಸ್ವಾಮಿ ಹಾಲಿ ಸಿಎಂ ವಿರುದ್ಧ ಕಿಡಿ ಕಾರಿದ್ದು, ಅತೃಪ್ತರಿಗೆ ಮುಂಬೈಗೆ ಕಳುಹಿಸಲು ಕಲ್ಪಿಸಿದ್ದ ವಿಶೇಷ ವಿಮಾನ ವ್ಯವಸ್ಥೆ ಪ್ರವಾಹದಲ್ಲಿ ಸಿಲುಕಿದ ಬಡವರಿಗೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಹೌದು ಜೆಡಿಎಸ್ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, 'ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು ಇಂದು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ! ಅತೃಪ್ತ ಶಾಸಕರಿಗೆ ಮುಂಬೈನಲ್ಲಿ ಉಳಿಯಲು 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು ಇಂದು ಬಡ ಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ!' ಎನ್ನುವ ಮೂಲಕ ಹಾಲಿ ಸಿಎಂ ಬಿ. ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿದೆ.

ಮಳೆಯಬ್ಬರಕ್ಕೆ ತತ್ತರಿಸಿದ ಕರ್ನಾಟಕ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿನ್ನೆ ಬುಧವಾರವೂ ಟ್ವೀಟ್ ಒಂದನ್ನು ಮಾಡುತ್ತಾ 'ರೋಮ್ ಹೊತ್ತಿ ಉರಿಯುವಾಗ  ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ, ಹಾಗೆಯೇ ಉತ್ತರ ಕರ್ನಾಟಕ ಭಾರೀ ಮಳೆಯಿಂದ ಜರ್ಜರಿತವಾಗಿರುವಾಗ ಯಡಿಯೂರಪ್ಪನವರು ದೆಹಲಿಗೆ ಹೋಗಿ ಕುಳಿತಿದ್ದಾರೆ.ಕರ್ನಾಟಕದಲ್ಲಿ ‌ಸಮಸ್ಯೆ ಹೇಳಿಕೊಳ್ಳೋಕೆ ಮಂತ್ರಿಮಂಡಲವೂ ಇಲ್ಲ.ಇದೇನಾ  ನಿಮ್ಮ ಜನಮೆಚ್ಚಿನ ಆಡಳಿತ ಮರ್ಯಾದಾ ಪುರುಷೋತ್ತಮರೇ' ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.