ಸದ್ಯದ ಪರಿಸ್ಥಿತಿಯಲ್ಲಿ ಬಾಲಕೃಷ್ಣ ಮರಳಿ ಜೆಡಿಎಸ್ನಲ್ಲೇ ಸಕ್ರೀಯರಾಗುವ ಸಾಧ್ಯತೆಗಳು ಕಡಿಮೆ ಇದ್ದು, ಬೇರೆ ಪಕ್ಷದತ್ತ ಒಲವು ಹೊಂದಿದ್ದಾರೆ. ಹೀಗಾಗಿ ಬಾಲಕೃಷ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರದಲ್ಲಿ ಬಿಜೆಪಿಯಲ್ಲಿ ಒಲವು ಕೂಡಾ ಇದೆ.
ಜೆಡಿಎಸ್ನಿಂದ ಅಮಾನತುಗೊಂಡಿರುವ ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿಯಲ್ಲಿ ಒಲವು ವ್ಯಕ್ತವಾಗಿದೆ. ಆದರೆ ಅದನ್ನು ಬಹಿರಂಗವಾಗಿ ತೋರ್ಪಡಿಸಿಕೊಳ್ಳಲು ಬಿಜೆಪಿ ನಾಯಕರು ಹಿಂಜರಿಯುತ್ತಿದ್ದರೆ, ತಮಗೆ ಬಿಜೆಪಿಯಿಂದ ಆಹ್ವಾನ ಬಂದಿರುವುದು ಅಕ್ಷರಶಃ ನಿಜ ಎಂದು ಶಾಸಕ ಬಾಲಕೃಷ್ಣ ಒಪ್ಪಿಕೊಂಡಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಗ್ರೆಸ್ ಪರ ಮತ ಚಲಾಯಿಸಿದ ಕಾರಣಕ್ಕೆ ಜೆಡಿಎಸ್ನಿಂದ ಅಮಾನತುಗೊಂಡ ಎಂಟು ಶಾಸಕರಲ್ಲಿ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಕೂಡಾ ಒಬ್ಬರು. ಇದೀಗ ಅಮಾನತುಗೊಂಡ ಶಾಸಕರು ಬೇರೆ ಬೇರೆ ಪಕ್ಷ ಸೇರಿಕೊಳ್ಳುವ ಮಾತುಗಳು ಕೇಳಿಬರುತ್ತಿರುವ ಸಮಯದಲ್ಲಿ ಹೆಚ್.ಸಿ. ಬಾಲಕೃಷ್ಣ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿ ಬಲವಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಾಲಕೃಷ್ಣ ಮರಳಿ ಜೆಡಿಎಸ್ನಲ್ಲೇ ಸಕ್ರೀಯರಾಗುವ ಸಾಧ್ಯತೆಗಳು ಕಡಿಮೆ ಇದ್ದು, ಬೇರೆ ಪಕ್ಷದತ್ತ ಒಲವು ಹೊಂದಿದ್ದಾರೆ. ಹೀಗಾಗಿ ಬಾಲಕೃಷ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರದಲ್ಲಿ ಬಿಜೆಪಿಯಲ್ಲಿ ಒಲವು ಕೂಡಾ ಇದೆ. ಯಾಕೆಂದರೆ ಹಿಂದೆ ಬಿಜೆಪಿಯಲ್ಲೇ ಶಾಸಕರಾಗಿದ್ದ ಬಾಲಕೃಷ್ಣ ಬದಲಾದ ರಾಜಕೀಯದಲ್ಲಿ ಜೆಡಿಎಸ್ಗೆ ವಲಸೆ ಹೋಗಿ ಶಾಸಕರಾದವರು. ಸದ್ಯಕ್ಕೆ ಮಾಗಡಿ ಕ್ಷೇತ್ರಕ್ಕೆ ಬಿಜೆಪಿಗೆ ಕೂಡಾ ಸಮರ್ಥ ಅಭ್ಯರ್ಥಿ ಇಲ್ಲದಿರುವುದು ಮತ್ತು ಬಾಲಕೃಷ್ಣ ಮೂಲತ: ಬಿಜೆಪಿಯವರೇ ಆಗಿರುವುದು ಕಮಲ ಪಾಳಯದಲ್ಲಿ ಸೇರ್ಪಡೆಗೆ ಯಾವುದೇ ಅಂತಹ ಆಕ್ಷೇಪ ವ್ಯಕ್ತಗೊಳ್ಳದಿರಲು ಕಾರಣವಾಗಿದೆ. 2018ರ ಚುನಾವಣೆಯಲ್ಲಿ 150ರ ಮಂತ್ರ ಜಪಿಸುತ್ತಿರುವ ಬಿಜೆಪಿಗೆ ಕೂಡಾ ಸಂಖ್ಯಾಬಲದ ಅವಶ್ಯಕತೆ ಇದ್ದು, ಹೀಗಾಗಿ ಬಾಲಕೃಷ್ಣ ಅವರನ್ನು ಸೇರ್ಪಡೆಗೊಳಿಸಿಕೊಂಡು ಮಾಗಡಿ ಕ್ಷೇತ್ರದಿಂದಲೇ ಕಣಕ್ಕಿಳಿಸುವ ಲೆಕ್ಕಾಚಾರ ನಡೆದಿದೆ. ಮುಂದಿನ ಚುನಾವಣೆಗೆ ಆರು ತಿಂಗಳು ಇರುವ ಸಮಯದಲ್ಲಿ ಬಾಲಕೃಷ್ಣ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಆದ್ರೆ ಆಂತರಿಕವಾಗಿ ಇದನ್ನು ಒಪ್ಪಿಕೊಳ್ಳುವ ರಾಜ್ಯ ಬಿಜೆಪಿ ನಾಯಕರು ಬಹಿರಂಗವಾಗಿ ಮಾತ್ರ ಹೇಳಿಕೊಳ್ಳಲು ಸಿದ್ಧರಿಲ್ಲ.
ಇನ್ನು ಶಾಸಕ ಬಾಲಕೃಷ್ಣ ಮುಂದೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಸಮಾನ ಅವಕಾಶಗಳಿದ್ದು, ಕಾಂಗ್ರೆಸ್ಗಿಂತ ಬಿಜೆಪಿಯತ್ತಲೇ ಹೆಚ್ಚು ಒಲವು ಹೊಂದಿದ್ದಾರೆ. ಯಾವ ಪಕ್ಷ ಸೇರಿದರೂ ಮಾಗಡಿಯಿಂದಲೇ ಬಾಲಕೃಷ್ಣ ಸ್ಫರ್ಧೆಗಿಳಿಯಲಿದ್ದು, ಕಾಂಗ್ರೆಸ್ ನಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಇರುವುದು ಕೊಂಚ ಸಮಸ್ಯೆಯಾಗಬಹುದು. ಆದರೆ ಬಿಜೆಪಿಯಲ್ಲಿ ಯಾರೂ ಕೂಡಾ ಹೇಳಿಕೊಳ್ಳುವ ನಾಯಕರು ಇಲ್ಲದೇ ಇರುವ ಕಾರಣ ಬಾಲಕೃಷ್ಣ ಬಿಜೆಪಿಯತ್ತಲೇ ಮುಖ ಮಾಡುವ ಚಿಂತನೆ ಹೊಂದಿದ್ದಾರೆ. ಬಿಜೆಪಿಯಿಂದ ಆಹ್ವಾನ ಬಂದಿರುವುದನ್ನು ಒಪ್ಪಿಕೊಂಡಿರುವ ಹೆಚ್.ಸಿ. ಬಾಲಕೃಷ್ಣ, ಪ್ರಮುಖ ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಒಟ್ಟಾರೆ, ಸದ್ಯ ಜೆಡಿಎಸ್ ಅಮಾನತುಗೊಂಡ ಶಾಸಕರ ಪಟ್ಟಿಯಲ್ಲಿರುವ ಮಾಗಡಿ ಶಾಸಕ ಬಾಲಕೃಷ್ಣ, ಬಿಜೆಪಿ ನಾಯಕರೊಂದಿಗೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುತ್ತಲೇ ಬಂದಿದ್ದಾರೆ. ಮೂಲತ: ಬಿಜೆಪಿಯವರೇ ಆಗಿರುವುದು ಮತ್ತೆ ಬಿಜೆಪಿ ಸೇರ್ಪಡೆಗೆ ಅಂತಹ ತೊಂದರೆ ಇಲ್ಲದಂತಾಗಿದೆ. ಹೀಗಾಗಿ ಲೆಕ್ಕಾಚಾರ ಹಾಕುತ್ತಲೇ ಬಂದಿರುವ ಹೆಚ್.ಸಿ. ಬಾಲಕೃಷ್ಣ, ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ಚುನಾವಣೆಯ ಹೊತ್ತಿಗೆ ಅದನ್ನು ಕಾರ್ಯಗತಗೊಳಿಸಲು ಚಿಂತಿಸಿದ್ದಾರೆ. ಒಂದು ವೇಳೆ ಬಾಲಕೃಷ್ಣ ಬಿಜೆಪಿ ಸೇರಿದ್ದೇ ಆದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಭಾಗದಲ್ಲಿ ಬಿಜೆಪಿಗೆ ಒಂದಷ್ಟು ಶಕ್ತಿ ಬಂದಂತಾಗಲಿದ್ದು, ಜೆಡಿಎಸ್ಗೆ ಕೊಂಚ ಮಟ್ಟದ ಹಿನ್ನೆಡೆ ಎದುರಾಗಲಿದೆ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.
