ಬಿಜೆಪಿ, ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನಿಂದಾಗಿ ಮತಗಳ ವಿಭಜನೆ ಯಾಗಿದ್ದರಿಂದ ಜೆಡಿಎಸ್‌ನ ಮಲ್ಲಿಕಾರ್ಜುನ ಖೂಬಾ 2013ರಲ್ಲಿ ನಿರಾಯಾಸವಾಗಿ ಆಯ್ಕೆಯಾಗಿದ್ದರು.
ಬಸವಕಲ್ಯಾಣ: ಬಿಜೆಪಿ, ಕೆಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ನಿಂದಾಗಿ ಮತಗಳ ವಿಭಜನೆ ಯಾಗಿದ್ದರಿಂದ ಜೆಡಿಎಸ್ನ ಮಲ್ಲಿಕಾರ್ಜುನ ಖೂಬಾ 2013ರಲ್ಲಿ ನಿರಾಯಾಸವಾಗಿ ಆಯ್ಕೆಯಾಗಿದ್ದರು.
ಆದರೆ ಈ ಬಾರಿ ಅವರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ಮರಾಠಾ ಸಮುದಾಯದ ಪ್ರಮುಖ ಮಾರುತಿ ಮೂಳೆ ಅವರು ಬಿಜೆಪಿ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಖೂಬಾ ಪ್ರವೇಶದಿಂದಾಗಿ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಹೆಚ್ಚು.
ಮಾಜಿ ಸಚಿವ ಬಸವರಾಜ ಪಾಟೀಲ್ ಅಟ್ಟೂರ್ ಪುತ್ರ ಲಿಂಗರಾಜ್, ಜಿ.ಪಂ. ಮಾಜಿ ಅಧ್ಯಕ್ಷ ಅನೀಲ್ ಭೂಸಾರೆ, ಉದ್ಯಮಿ ಪ್ರದೀಪ ವಾತಡೆ ಕೂಡ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಟಿಕೆಟ್ ಕೈತಪ್ಪುವ ಹಿನ್ನೆಲೆಯಲ್ಲಿ ಲಿಂಗರಾಜ ಅವರು ಜೆಡಿಎಸ್ಗೆ ಸೇರಿದರೂ ಅಚ್ಚರಿ ಇಲ್ಲ. ಅಟ್ಟೂರ ಅವರು ಈ ಹಿಂದೆ ಜನತಾದಳದಲ್ಲಿದ್ದವರು, ಅಲ್ಲೇ ಮಂತ್ರಿಯಾಗಿದ್ದವರು.
ಕಾಂಗ್ರೆಸ್ಸಿನಿಂದ ಕೆಪಿಸಿಸಿ ಕಾರ್ಯದರ್ಶಿ ಬಿ. ನಾರಾಯಣ, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಶಿವರಾಜ ನರಶೆಟ್ಟಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಆನಂದ ದೇವಪ್ಪ ಅವರು ಆಕಾಂಕ್ಷಿಗಳಾಗಿದ್ದಾರೆ.
