Asianet Suvarna News Asianet Suvarna News

ಈ ವ್ಯಕ್ತಿ ಬಗ್ಗೆ ಎಚ್‌ಡಿಕೆ ಒಲವಿದೆ - ಗೌಡರಿಗೇಕಿಲ್ಲ ..?

ವಿಧಾನಪರಿಷತ್‌ಗೆ ಸತತ ಏಳು ಬಾರಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿಅವರಿಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ಮೇಲ್ಮನೆ ಸದಸ್ಯರಿಂದಲೇ ಒತ್ತಡ ಇದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಹೊರಟ್ಟಿ ಬಗ್ಗೆ ಒಲವಿದ್ದರೂ ದೇವೇಗೌಡರಿಗೆ ಇಲ್ಲ ಎನ್ನಲಾಗಿದೆ.

JDS Leader Horatti Get council chairman post

ಬೆಂಗಳೂರು :  ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿಗೆ ಸಭಾಪತಿ ಸ್ಥಾನ ನೀಡುವ ಮೂಲಕ ಸಚಿವ ಸಂಪುಟದಿಂದ ದೂರ ಇಡುವ ಆಲೋಚನೆಯನ್ನು ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಯೋಜನೆ ರೂಪಿಸಿದ್ದಾರೆ. ಇದೇ ವೇಳೆ, ಪಕ್ಷದ ‘ಸಂಪನ್ಮೂಲ ವ್ಯಕ್ತಿ’ಯೂ ಆಗಿರುವ ನೂತನ ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌ ಅವರಿಗೆ 2ನೇ ಹಂತದ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ತಮ್ಮ ನಿವಾಸದಲ್ಲಿ ನಡೆದ ಪಕ್ಷದ ಶಾಸಕಾಂಗದ ಸಭೆಯಲ್ಲಿಯೂ ಮಾತುಕತೆ ನಡೆಸಿದ್ದು, ಬಹುತೇಕ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಪರಿಷತ್‌ಗೆ ಸತತ ಏಳು ಬಾರಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿಅವರಿಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ಮೇಲ್ಮನೆ ಸದಸ್ಯರಿಂದಲೇ ಒತ್ತಡ ಇದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಹೊರಟ್ಟಿ ಬಗ್ಗೆ ಒಲವಿದ್ದರೂ ದೇವೇಗೌಡರಿಗೆ ಇಲ್ಲ ಎನ್ನಲಾಗಿದೆ. ಹೀಗಾಗಿ ಬುಧವಾರದ ಸಚಿವ ಸಂಪುಟ ವಿಸ್ತರಣೆಯ ವೇಳೆ ಕೊನೆಯ ಹಂತದಲ್ಲಿ ಹೊರಟ್ಟಿಅವರಿಗೆ ಸ್ಥಾನ ಲಭಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಪರಿಷತ್ತಿನ ಸಭಾಪತಿಯಾಗಿರುವ ಡಿ.ಎಚ್‌.ಶಂಕರಮೂರ್ತಿ ಅವರ ಅವಧಿಯು ಇದೇ ತಿಂಗಳ 21ರಂದು ಕೊನೆಯಾಗಲಿದೆ. ತರುವಾಯ ಕಾಂಗ್ರೆಸ್‌ ಬೆಂಬಲದೊಂದಿಗೆ ಸಭಾಪತಿ ಸ್ಥಾನಕ್ಕೆ ಹೊರಟ್ಟಿಅವರನ್ನು ನಿಯುಕ್ತಿಗೊಳಿಸುವ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಗುತ್ತದೆ. ಬುಧವಾರ ಸಚಿವ ಸಂಪುಟ ವಿಸ್ತರಣೆಯ ಬಳಿಕ ಸಭಾಪತಿ ನೇಮಕ ಪ್ರಕ್ರಿಯೆಗೆ ದೇವೇಗೌಡ ಅವರು ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಹೊಸ ರಣತಂತ್ರ ರೂಪಿಸಲಾಗಿದ್ದು, ಹೊರಟ್ಟಿಅವರ ಮನವೊಲಿಕೆಯ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

ಈ ಹಿಂದೆ ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಸಲು ನಡೆಸಲಾದ ತಂತ್ರ ರೂಪಿಸಲಾಗಿತ್ತು. ಈ ವೇಳೆ ಶಂಕರ ಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಹೊರಟ್ಟಿಅವರನ್ನು ನೇಮಕ ಮಾಡುವ ಯೋಚನೆ ಮಾಡಲಾಗಿತ್ತು. ಆದರೆ ಆಗ ಅದು ಕಾರ್ಯತಂತ್ರ ಫಲ ನೀಡಲಿಲ್ಲ. ಈಗ ಸಭಾಪತಿ ಹುದ್ದೆ ಅಲಂಕರಿಸಲು ಹೊರಟ್ಟಿಆಸಕ್ತಿ ಇಲ್ಲ. ಸದ್ಯಕ್ಕೆ ಸಚಿವ ಸ್ಥಾನ ಸಿಗದಿದ್ದರೂ ಮುಂದಿನ ದಿನದಲ್ಲಾದರೂ ಸಿಗಬಹುದು ಎಂಬ ಭರವಸೆ ಇದೆ. ಆದರೆ, ಪಕ್ಷದ ವರಿಷ್ಠರಾದ ಎಚ್‌.ಡಿ. ದೇವೇಗೌಡ ಅವರ ಲೆಕ್ಕಾಚಾರವೇ ಬೇರೆಯಾಗಿದೆ. ಅನುಭವಿ ರಾಜಕಾರಣಿಯಾಗಿರುವ ಬಸವರಾಜ್‌ ಹೊರಟ್ಟಿಅವರನ್ನು ಸಚಿವ ಸಂಪುಟದಿಂದ ದೂರ ಇಡಲು ಸಭಾಪತಿ ಹುದ್ದೆ ಒಂದೇ ದಾರಿ. ಸಚಿವ ಸ್ಥಾನ ನೀಡದಿದ್ದರೆ ಬೇರೆಯದ್ದೇ ಸಂದೇಶ ರವಾನೆಯಾಗಲಿದೆ. ಹೀಗಾಗಿ ಹೊರಟ್ಟಿಗೆ ಸಭಾಪತಿ ಹುದ್ದೆಗೆ ಒಪ್ಪಿಸುವ ಕಸರತ್ತು ಆರಂಭಗೊಂಡಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಫಾರೂಕ್‌ಗೆ ಮಂತ್ರಿ ಸ್ಥಾನ ಈಗಲೇ ಇಲ್ಲ?

ಸದ್ಯಕ್ಕೆ ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಫಾರೂಕ್‌ಗೆ ಸಚಿವ ಸ್ಥಾನ ನೀಡದಿದ್ದರೂ ಮುಂದಿನ ಹಂತದ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಅವರು ಅಸಮಾಧಾನಗೊಂಡ ನಾಯಕರ ಮನವೊಲಿಕೆ ಮಾಡಿ 2-3 ತಿಂಗಳ ನಂತರ ಫಾರೂಕ್‌ಗೆ ಸ್ಥಾನ ನೀಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಫಾರೂಕ್‌ ಈಗಷ್ಟೇ ವಿಧಾನಪರಿಷತ್‌ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ತಕ್ಷಣಕ್ಕೇ ಸಚಿವ ಸ್ಥಾನ ನೀಡುವ ಬದಲು ಕೆಲವು ತಿಂಗಳು ಕಾಯಲಿ ಎಂಬ ಅಭಿಪ್ರಾಯ ದೇವೇಗೌಡರಿಗೆ ಇದ್ದಂತಿದೆ.

Follow Us:
Download App:
  • android
  • ios