ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಮುಖ್ಯಮಂತ್ರಿಗಳು ಎಷ್ಟು ದಿನ ತಾಳ್ಮೆಯಿಂದ ಕಾಯುತ್ತಾರೋ ನೋಡೋಣ. ಎಲ್ಲವನ್ನೂ ಸುಮ್ಮನೆ ನೋಡಿಕೊಂಡು ಕುಳಿತು ಕೊಳ್ಳಲು ಸಾಧ್ಯವಿಲ್ಲ. ಪುಟಗೋಸಿ ಮಂತ್ರಿಗಿರಿ ಗಾಗಿ ನಾವು ಕಾದುಕೊಂಡಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ನೇರಾನೇರ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು: ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್‌ನ ಇತ್ತೀಚಿನ ನಡವಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಮುಖ್ಯಮಂತ್ರಿಗಳು ಎಷ್ಟು ದಿನ ತಾಳ್ಮೆಯಿಂದ ಕಾಯುತ್ತಾರೋ ನೋಡೋಣ. ಎಲ್ಲವನ್ನೂ ಸುಮ್ಮನೆ ನೋಡಿಕೊಂಡು ಕುಳಿತು ಕೊಳ್ಳಲು ಸಾಧ್ಯವಿಲ್ಲ. ಪುಟಗೋಸಿ ಮಂತ್ರಿಗಿರಿ ಗಾಗಿ ನಾವು ಕಾದುಕೊಂಡಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ನೇರಾನೇರ ವಾಗ್ದಾಳಿ ಮಾಡಿದ್ದಾರೆ.

ಶುಕ್ರವಾರ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಸಂಸದೀಯ ಕಾರ್ಯದರ್ಶಿ, ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಮುನ್ನ ಉಭಯ ಪಕ್ಷಗಳ ನಾಯಕರು, ರಾಷ್ಟ್ರೀಯ ಅಧ್ಯಕ್ಷರು ಚರ್ಚೆ ನಡೆಸಬೇಕು. ಆದರೆ ಅಂತಹ ಚರ್ಚೆಯನ್ನು ಯಾರು ಎಲ್ಲಿ ನಡೆಸಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ಸಂಚು: ಪರಮೇಶ್ವರ್ ಅವರ ಬಳಿ ಇದ್ದ ಗೃಹ ಖಾತೆಯನ್ನು ಕಿತ್ತುಕೊಂಡಿರುವುದರ ಹಿಂದೆ ಕಾಂಗ್ರೆಸ್ ನಾಯಕರ ಸಂಚಿರಬಹುದೇ ಹೊರತು ತಮ್ಮ ಪಾತ್ರ ಏನಿಲ್ಲ. 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ, ಕಳೆದು 6 ತಿಂಗಳಿಂದ ಗೃಹ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಗೃಹ ಇಲಾಖೆಯಲ್ಲಿ ನಾನು ಹಸ್ತಕ್ಷೇಪ ಮಾಡಿದ್ದರಿಂದಲೇ ನೊಂದು ಗೃಹ ಖಾತೆಯನ್ನು ಪರಮೇಶ್ವರ್ ಬಿಟ್ಟುಕೊಟ್ಟಿದ್ದಾರೆ ಎಂದು ಯಾರು ಅಪಪ್ರಚಾರ ಮಾಡುತ್ತಿದ್ದಾರೋ ಅವರೇ ಎತ್ತಂಗಡಿಗೆ ಕಾರಣ ಇರಬಹುದು ಎಂದರು. ಅಲ್ಲದೆ, ನಾನುಎಂದೂ ಕೂಡಾ ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದ ವೇಳೆ ವರ್ಗಾವಣೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿರಲಿ, ಒಬ್ಬ ಅಟೆಂಡರ್ ವರ್ಗಾವಣೆಗೂ ಅವರ ಬಳಿ ಹೋಗಿಲ್ಲ.

ನನ್ನ ಕ್ಷೇತ್ರದ ಕೆಲಸಗಳಿಗೆ ಹೊರತುಪಡಿಸಿದರೆ ಬೇರೆ ಯಾವುದೇ ಕೆಲಸಕ್ಕೂ ಹೋಗಿಲ್ಲ. ಮುಖ್ಯಮಂತ್ರಿ ಗಳು ಸಹ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿ ದರು. ಒಂದು ವೇಳೆ ಹಸ್ತಕ್ಷೇಪ ಮಾಡಿದ್ದರೆ ಪೊಲೀಸ್ ಮಹಾನಿರ್ದೇಶಕರನ್ನು ಕೇಳಲಿ, ಇಲ್ಲವೇ ಗೃಹ ಕಾರ್ಯ ದರ್ಶಿಯನ್ನು ಕೇಳಲಿ. ಅದನ್ನು ಬಿಟ್ಟು ನಾನು ಮಾಡದ ಕೆಲಸಕ್ಕೆ ನನ್ನನ್ನು ಹೊಣೆ ಮಾಡಿ, ಟೀವಿಗಳಲ್ಲಿ ಕುಳಿತುಕೊಂಡು ಟೀಕೆ ಮಾಡಿದರೆ ನಾನು ಓಡಿ ಹೋಗುತ್ತೇನೆ ಎಂದು ತಿಳಿದುಕೊಂಡರೆ ಅದು ಭ್ರಮೆ ಎಂದರು. 

ಕಾಂಗ್ರೆಸ್‌ಗೆ ಹಾನಿ: ದಲಿತರ ಹಿರಿಯ ನಾಯಕರಾಗಿರುವ ಡಾ.ಪರಮೇಶ್ವರ್ ಅವರ ಇಂದಿನ ಸ್ಥಿತಿಗೆ ಕಾರಣರಾದವರು ನನ್ನ ಮೇಲೆ ಗೂಬೆ ಕೂರಿಸಿದರೆ ಅದಕ್ಕೆಲ್ಲ ಹೆದರುವುದಿಲ್ಲ. ಆದರೆ ಈ ಬೆಳವಣಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಏಟು ನೀಡಲಿದೆ ಎಂದ ರೇವಣ್ಣ, ಪರಮೇಶ್ವರ್ ಅವರ ಬಳಿ ಇದ್ದ ಖಾತೆಯನ್ನು ಹಿಂಪಡೆಯಬಾರದಿತ್ತು ಎಂದು ಅಭಿಪ್ರಾಯಪಟ್ಟರು.