ಹಾಸನದಲ್ಲಿ ಬುಧವಾರ 18ರಿಂದ 20 ಸಾವಿರ ಜನರನ್ನು ಕರೆಸಿ, ಜೆಡಿಎಸ್‌ ಪಕ್ಷವನ್ನು ಬಿಜೆಪಿ ‘ಬಿ ಟೀಂ’ ಎಂದಿದ್ದಾರೆ. ನನ್ನ ವೈರಿಯೂ ನನ್ನ ಬಗ್ಗೆ ಈ ರೀತಿ ಮಾತನಾಡಲ್ಲ. ಏ.2 ರಂದು ಹಾಸನದಲ್ಲಿ 1 ಲಕ್ಷ ಜನರನ್ನು ಸೇರಿಸಿ ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಗುಡುಗಿದ್ದಾರೆ.

ಮೈಸೂರು (ಮಾ.23): ಹಾಸನದಲ್ಲಿ ಬುಧವಾರ 18ರಿಂದ 20 ಸಾವಿರ ಜನರನ್ನು ಕರೆಸಿ, ಜೆಡಿಎಸ್‌ ಪಕ್ಷವನ್ನು ಬಿಜೆಪಿ ‘ಬಿ ಟೀಂ’ ಎಂದಿದ್ದಾರೆ. ನನ್ನ ವೈರಿಯೂ ನನ್ನ ಬಗ್ಗೆ ಈ ರೀತಿ ಮಾತನಾಡಲ್ಲ. ಏ.2 ರಂದು ಹಾಸನದಲ್ಲಿ 1 ಲಕ್ಷ ಜನರನ್ನು ಸೇರಿಸಿ ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಗುಡುಗಿದ್ದಾರೆ.

ಚಾಮರಾಜ ಕ್ಷೇತ್ರದ ಜನಸಂಪರ್ಕ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಬಿಟ್ಟು ಹೋದ ಸಿದ್ದರಾಮಯ್ಯ ನೀತಿವಂತರಾಗಿದ್ದರೆ ಕಾಂಗ್ರೆಸ್‌ ಸೇರುತ್ತಿರಲಿಲ್ಲ. ನಾನು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಸಿದ್ದರಾಮಯ್ಯನನ್ನು ಡಿಸಿಎಂ ಮಾಡಲು ಸೋನಿಯಾ ಗಾಂಧಿ ಮನೆಗೆ ಬಾಗಿಲಿಗೆ ಹೋಗಿದ್ದನ್ನು ಬಿಟ್ಟರೆ ಮತ್ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಆತನನ್ನು ಡಿಸಿಎಂ ಮಾಡಿದ್ದ ತಪ್ಪಿಗೆ ನಿನ್ನೆ ಹಾಸನದಲ್ಲಿ ನನ್ನ ವಿರುದ್ಧ ದುರಹಂಕಾರದ, ಅಧಿಕಾರದ ಮದದಲ್ಲಿ ಮಾತನಾಡಿದ್ದಾರೆ ಎಂದು ದೇವೇಗೌಡರು ಕಿಡಿಕಾರಿದರು.

ನಾನೇನು ಮೈಸೂರಿನಲ್ಲಿ ಕಡುಬು ತಿನ್ನಲು ಬರುವುದಲ್ಲ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಹಾಗೂ ಎಚ್‌.ವಿಶ್ವನಾಥ್‌ ಅವರನ್ನು ಹೇಗೆ ಸೋಲಿಸುತ್ತಾರೋ ನಾನೂ ನೋಡುತ್ತೇನೆ ಎಂದು ಸವಾಲು ಹಾಕಿದರು.

ಚುನಾವಣೆಯಲ್ಲಿ ಇಡೀ ಜಿಲ್ಲೆಯ ಉಸ್ತುವಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ. ನಾನು ಮೈಸೂರಿನಿಂದಲೇ ರಾಜಕೀಯ ಗರಡಿ ಆರಂಭಿಸಿದ್ದೇನೆ. ನನಗೀಗ 85 ವರ್ಷ, ಸಿದ್ದರಾಮಯ್ಯನಿಗೆ 71 ವರ್ಷ. ನನ್ನಲ್ಲಿ ಶಕ್ತಿ ಕಡಿಮೆಯಾಗಿಲ್ಲ. ‘ಸಿದ್ದರಾಮಯ್ಯನವರೇ ಅಖಾಡಕ್ಕೆ ಬನ್ನಿ’ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಗೆ ಪಂಥಾಹ್ವಾನ ನೀಡಿದರು.