ಬೆಂಗಳೂರು [ಸೆ.10]:  ಪಾರದರ್ಶಕ ಟೆಂಡರ್‌ ನಡೆಸುವ ಕಾರಣಕ್ಕಾಗಿ ಜಾರಿಗೆ ತಂದ ಇ-ಟೆಂಡರ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಲಾಗಿದೆ ಎಂಬ ನೆಪ ಹೇಳಿ ಇ-ಆಡಳಿತ ಇಲಾಖೆಯೇ ಭರ್ಜರಿ ವ್ಯಾಪಾರಕ್ಕೆ ನಿಂತಿದ್ದು, ಇದು ರಾಜ್ಯದ ದುರಂತ ಮತ್ತು ಇ-ಆಡಳಿತಕ್ಕೆ ಕಪ್ಪು ಚುಕ್ಕೆ ಎಂದು ಜೆಡಿಎಸ್‌ ರಾಷ್ಟ್ರೀಯ ವಕ್ತಾರ ರಮೇಶ್‌ಬಾಬು ಗಂಭೀರ ಆರೋಪ ಮಾಡಿದ್ದಾರೆ.

ಸರ್ಕಾರಿ ಇಲಾಖೆಯ ಟೆಂಡರ್‌ ವ್ಯವಸ್ಥೆಯಲ್ಲಿ ಪ್ರಭಾವ, ಭ್ರಷ್ಟಾಚಾರ, ಬಲಪ್ರಯೋಗ, ಅಧಿಕಾರ ದುರುಪಯೋಗ, ನಿಧಾನಗತಿ, ಅಕ್ರಮ ದಂಧೆ ನಿಲ್ಲಿಸುವ ಮೂಲಕ ಉದ್ದೇಶ ಹೊಂದಲಾಗಿತ್ತು. ಆದರೆ, ಈಗ ಇ-ಟೆಂಡರ್‌ ವೆಬ್‌ಸೈಟ್‌ಗೆ ಕನ್ನಹಾಕಲಾಗಿದೆ ಎಂಬ ನೆಪದಲ್ಲಿ ಇ-ಆಡಳಿತ ಭ್ರಷ್ಟಾಚಾರದಲ್ಲಿ ತೊಡಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿಯೇ ವೆಬ್‌ಸೈಟ್‌ಗೆ ಕನ್ನ ಹಾಕಲಾಗಿದೆ ಎಂಬ ಸುದ್ದಿ ಹರಡಲಾಯಿತು. ಇದು ನಿಜವಾಗಿದ್ದರೆ ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಲು ಸಮಸ್ಯೆಯಾದರೂ ಏನು? ಕನ್ನ ಹಾಕಿದ್ದರೆ ಯಾರು ಹಾಗೂ ಯಾಕೆ ಎಂದು ಸಾರ್ವಜನಿಕವಾಗಿ ಉತ್ತರಿಸಬೇಕಲ್ಲವೇ? ಇಲಾಖೆಯ ಸಿಬ್ಬಂದಿ ವೈಬ್‌ಸೈಟ್‌ ಹ್ಯಾಕ್‌ ಮಾಡಿರುವ ನಾಟಕದಲ್ಲಿ ಮತ್ತು ಮೋಸದಲ್ಲಿ ಶಾಮೀಲಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವೆಬ್‌ಸೈಟ್‌ಗೆ ಕನ್ನ ಹಾಕಿದ್ದರೆ ಈಗಲೂ ಇ-ಟೆಂಡರ್‌ ಮಾಡಲು ಹೇಗೆ ಸಾಧ್ಯ? ತಮಗೆ ಬೇಕಾದ ಇ-ಟೆಂಡರ್‌ ಈಗಲೂ ನಡೆಯುತ್ತಿದೆ. ಕಮಿಷನ್‌ ನೀಡಿದವರಿಗೆ ಇಎಂಡಿ ಹಣ ವಾಪಸ್‌ ನೀಡಲಾಗುತ್ತಿದೆ. ಇದರಿಂದ ಕೆಲವು ಇಲಾಖಾ ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬರುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.