ಸೊರಬದ ಮಾಜಿ ಜೆಡಿಎಸ್ ಶಾಸಕ ಮಧು ಬಂಗಾರಪ್ಪಗೆ ಬಯಸದೆ ಬಂದ ಭಾಗ್ಯ. 

ಬೆಂಗಳೂರು, [ಅ.10]: ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿಯಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಕಾಂಗ್ರೆಸ್ ಪಾಲಾಗಿದ್ದ ಶಿವಮೊಗ್ಗ ಲೋಕಸಭಾ ಟಿಕೆಟ್ ಇದೀಗ ಜೆಡಿಎಸ್ ಗೆ ದಕ್ಕುವ ಸಾಧ್ಯತೆಗಳಿವೆ.

ಹೌದು...ನಿನ್ನೆ [ಮಂಗಳವಾರ] ತಡರಾತ್ರಿ ವರೆಗೂ ನಡೆದ ಮೈತ್ರಿ ಪಕ್ಷಗಳ ನಾಯಕರ ಸರಣಿ ಸಭೆಯ ಮಾತುಕತೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಬಳ್ಳಾರಿ ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಲು ಚರ್ಚೆ ನಡೆದಿತ್ತು. 

ಆದರೆ, ಮೂಲಗಳ ಪ್ರಕಾರ ಇದೀಗ ಸ್ವತಃ ಕಾಂಗ್ರೆಸ್ ಶಿವಮೊಗ್ಗವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಏಕೆಂದರೆ ಶಿವಮೊಗ್ಗ ಲೋಕಸಭಾ ಸ್ಪರ್ಧೆಗೆ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಬಂಡಾಯದ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗವನ್ನು ಜೆಡಿಎಸ್ ಗೆ ನೀಡಲು ಕೈ ನಾಯಕರು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೈ ನಾಯಕರ ಮಾತಿಗೆ ಜೆಡಿಎಸ್ ನಾಯಕರು ಸಮ್ಮತಿಸಿದ್ದು, ಮಧು ಬಂಗಾರಪ್ಪ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಗಳಿವೆ.

ಉಪಚುನಾವಣೆ ಮಾತ್ರವಲ್ಲ, ನಂತರ ಬರುವ ಸಾರ್ವತ್ರಿಕ ಚುನಾವಣೆಯಲ್ಲೂ ಮಧು ಬಂಗಾರಪ್ಪಗೆ ಅವಕಾಶ ನೀಡಲು ಸಾಧ್ಯತೆಗಳಿವೆ. ಗೀತಾ ಶಿವರಾಜಕುಮಾರ್ ಸ್ಪರ್ಧೆ ಮಾಡಿದ್ರೆ ಕಷ್ಟವಾಗಬಹುದು. 

ಗೀತಾ ಸ್ಪರ್ಧೆ ಬಿಜೆಪಿಗೆ ಸುಲಭ ತುತ್ತಾಗಬಹುದು. ಮಧುಬಂಗಾರಪ್ಪ ಸಕ್ರಿಯಾ ರಾಜಕಾರಣದಲ್ಲಿದ್ದಾರೆ. ಈ ಕಾರಣಕ್ಕೆ ಮಧುಗೆ ಟಿಕೆಟ್ ನೀಡಲು ಜೆಡಿಎಸ್ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.