ಬೆಂಗಳೂರು, [ಅ.03]: ನಾನು ಪದವಿಗಾಗಲಿ, ಹಣಕ್ಕಾಗಲಿ ರಾಜೀನಾಮೆ ನೀಡಲಿಲ್ಲ. ಕ್ಷೇತ್ರದಲ್ಲಿ ನಮಗೆ ತುಂಬಾ ನೋವಿತ್ತು. ಒಬ್ಬ ಶಾಸಕನಾಗಿ ಕೆಲಸ ಮಾಡುವುದಕ್ಕೆ ಬಿಡಲಿಲ್ಲ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಅನರ್ಹಗೊಂಡ ಕೆ.ಆರ್.ಪೇಟೆಯ ಜೆಡಿಎಸ್​ ಶಾಸಕ ನಾರಾಯಣಗೌಡ ಎಂದು ಸ್ಪಷ್ಟಪಡಿಸಿದರು. 

ಇಂದು [ಶನಿವಾರ] ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ಗೌಡರ ಮನೆಯಲ್ಲೊಂದು ಸಿಂಡಿಕೇಟ್ ಇದೆ. ಆ ಸಿಂಡಿಕೇಟ್​ನ್ನು ದೇವೇಗೌಡರ ಕುಟುಂಬ ಬೆಳೆಸಿದೆ. ನಾನು ಒಬ್ಬ ಶಾಸಕ ಹೋದರೆ ಕನಿಷ್ಠ ಒಂದು ಟೀ ಕೂಡ ಕೊಡಲ್ಲ ಎಂದು ದೇವೇಗೌಡ್ರ ಕುಟುಂಬದ ವಿರುದ್ಧ ಕಿಡಿಕಾರಿದರು.

ಕೆ.ಆರ್.ಪೇಟೆಯಲ್ಲಿ ಅವರು ಯಾರನ್ನು ಬೇಕಾದರೂ ನಿಲ್ಲಿಸಲಿ, ಅವರು ತುಂಬಾ ದೊಡ್ಡವರು. ಅಭ್ಯರ್ಥಿ ಹಾಕುವ ಬಗ್ಗೆ ನಾನು ಮಾತನಾಡಲ್ಲ. ನಾನೊಬ್ಬ ಒಕ್ಕಲಿಗ, ಮಹಾರಾಷ್ಟ್ರದಲ್ಲಿ ಉದ್ಯಮ ನಡೆಸುತ್ತೇನೆ. ಒಬ್ಬ ಒಕ್ಕಲಿಗನನ್ನೇ ಅವರು ಬೆಳೆಸಲಿಲ್ಲ. ಕಿಡಿಗೇಡಿಗಳ ಗುಂಪಿನ ಮಾತು ಕೇಳಿ ನೋವು ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕನಾದ ನನ್ನನ್ನು ಎಚ್​.ಡಿ.ಕುಮಾರಸ್ವಾಮಿ ನಿರ್ಲಕ್ಷಿಸಿದರು. ನನ್ನ ಕ್ಷೇತ್ರಕ್ಕೆ ಅನುದಾನ ನೀಡದೆ ನನಗೆ ಅವಮಾನ ಮಾಡಿದ್ದಾರೆ. ನನ್ನ ವಿಚಾರವಾಗಿ ಚಾಡಿ ಮಾತನ್ನು ಕೇಳಿ ಈ ರೀತಿ ಮಾಡಿದ್ದಾರೆ. 

ಕ್ಷೇತ್ರದಲ್ಲಿ ಒಂದು ಗುಂಪಿನ ಮಾತನ್ನು ಕೇಳಿ ನನಗೆ ಅನ್ಯಾಯ ಮಾಡಿದರು. ಒಕ್ಕಲಿಗ ಸಮುದಾಯದ ಅಭಿವೃದ್ಧಿ ಮುಂಬೈನಲ್ಲಿ ಮಾಡುತ್ತಿದ್ದೆ. ಒಕ್ಕಲಿಗನನ್ನೆ ಗುರುತಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.