ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಒಗ್ಗಟ್ಟು ಪ್ರದರ್ಶನದ ಮೂಲಕ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಮಿತ್ರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಗಂಭೀರವಾಗಿ ಆರಂಭಿಸಿವೆ.

ಆಗಿದ್ದು ಆಗಿ ಹೋಗಿದೆ. ಉಭಯ ಪಕ್ಷಗಳಿಗೂ ದೊಡ್ಡ ಮಟ್ಟದ ಸೋಲು ಉಂಟಾಗಿರುವುದರಿಂದ ಈಗ ಪ್ರತಿಷ್ಠೆ ಕೈಬಿಟ್ಟು ಬಿಜೆಪಿಯನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಡಳಿತಾರೂಢ ಪಕ್ಷಗಳಲ್ಲಿನ ಅತೃಪ್ತ ಶಾಸಕರು ಬಿಜೆಪಿಯತ್ತ ಆಕರ್ಷಿತರಾಗಿ ವಲಸೆ ಹೋಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿಲುವಿಗೆ ಉಭಯ ಪಕ್ಷಗಳ ನಾಯಕರು ಬಂದಿದ್ದಾರೆ.

ಗುರುವಾರ ಫಲಿತಾಂಶ ಹೊರಬಿದ್ದ ಬಳಿಕ ತೀವ್ರ ಆಘಾತದಲ್ಲಿದ್ದ ಉಭಯ ಪಕ್ಷಗಳ ನಾಯಕರು ಹಲವು ಸುತ್ತಿನ ಸಭೆಗಳನ್ನು ನಡೆಸುವ ಮೂಲಕ ಮುಂದಿನ ಅಪಾಯಗಳನ್ನು ಎದುರಿಸುವ ಕುರಿತು ಸಮಾಲೋಚನೆ ನಡೆಸಿದರು. ಗುರುವಾರ ರಾತ್ರಿಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಇದ್ದರು.

ಒಂದು ಹಂತದಲ್ಲಿ ಕುಮಾರಸ್ವಾಮಿ ಅವರು ಚುನಾವಣೆಯ ಸೋಲಿನ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ಕಾಂಗ್ರೆಸ್‌ ನಾಯಕರ ಬಳಿ ವ್ಯಕ್ತಪಡಿಸಿದ್ದರು. ಈ ಮಾಹಿತಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೂ ತಲುಪಿ ದೂರವಾಣಿ ಮೂಲಕ ಕುಮಾರಸ್ವಾಮಿ ಅವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಅದರ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ತಮ್ಮ ಗೃಹ ಕಚೇರಿಯಲ್ಲಿ ಸಚಿವ ಸಂಪುಟದ ಅನೌಪಚಾರಿಕ ಸಭೆ ನಡೆಸುವ ಮೂಲಕ ಎಲ್ಲ ಸಚಿವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದರು. ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ತಿರುಗೇಟು ನೀಡಿ ಸುಗಮವಾಗಿ ಸರ್ಕಾರ ನಡೆಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೇರಿದಂತೆ ಹಿರಿಯ ಸಚಿವರು ಕೆಲವು ಸಲಹಾ ಸೂತ್ರಗಳನ್ನು ಪ್ರಸ್ತಾಪಿಸಿದರು.

ಮುಖ್ಯಮಂತ್ರಿಗಳು ಕಾಂಗ್ರೆಸ್‌ ಶಾಸಕಾಂಗ ಸಭೆಗೆ ಹಾಜರಾಗಿ ಶಾಸಕರ ಅಹವಾಲು ಕೇಳಿ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜಂಟಿ ಶಾಸಕಾಂಗ ಸಭೆ ಕರೆದು ಎರಡೂ ಪಕ್ಷಗಳ ಶಾಸಕರಲ್ಲಿನ ಭಿನ್ನಾಭಿಪ್ರಾಯ, ಕ್ಷೇತ್ರಗಳ ಸಮಸ್ಯೆ, ಅನುದಾನ ಹಂಚಿಕೆ ತಾರತಮ್ಯ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸಿ ವಿಶ್ವಾಸ ಮೂಡಿಸಬೇಕು. ಜಿಲ್ಲಾವಾರು ಸಚಿವರು, ಶಾಸಕರು, ಅಧಿಕಾರಿಗಳ ಸಭೆ ನಡೆಸಿ ಸ್ಥಳೀಯ ಸಮಸ್ಯೆಗೆ ಆದ್ಯತೆ ನೀಡಿ ಬಗೆಹರಿಸಬೇಕು. ಪ್ರಾದೇಶಿಕವಾರು, ಜಿಲ್ಲಾವಾರು ಸಭೆಗಳಲ್ಲಿ ಕಾಮಗಾರಿಗಳ ಮತ್ತು ಅನುದಾನಕ್ಕೆ ಅನುಮೋದನೆ ನೀಡಬೇಕು. ಜೆಡಿಎಸ್‌-ಕಾಂಗ್ರೆಸ್‌ ಸಚಿವರು ಎರಡು ಪಕ್ಷಗಳ ಶಾಸಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಜೊತೆಗೆ ಪಕ್ಷದ ಕಾರ್ಯಕರ್ತರಿಗೆ ಸಹಕಾರ ನೀಡಬೇಕು ಎಂಬ ಸಲಹೆಗಳನ್ನು ನೀಡಲಾಗಿದೆ.

ಕಾಂಗ್ರೆಸ್‌ ಶಾಸಕರಿಗೆ ಮುಖ್ಯಮಂತ್ರಿಯ ಭೇಟಿಗಾಗಲಿ ಅಥವಾ ಸಚಿವರ ಭೇಟಿಗಾಗಲಿ ಸಮಸ್ಯೆಯಾಗಬಾರದು. ಜೆಡಿಎಸ್‌ ಶಾಸಕರಿಗೆ ಇರುವ ಸ್ವಾತಂತ್ರ್ಯ ಕಾಂಗ್ರೆಸ್‌ ಶಾಸಕರಿಗೂ ನೀಡಬೇಕು. ಬಾಕಿ ಇರುವ ನಿಗಮ-ಮಂಡಳಿಗಳ ನೇಮಕಾತಿಯನ್ನು ಎರಡು ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭರ್ತಿ ಮಾಡಬೇಕು. ಅಧಿಕಾರಿಗಳ ವರ್ಗಾವಣೆ, ಆಯಕಟ್ಟಿನ ಪ್ರದೇಶಗಳಿಗೆ ನಿಯೋಜನೆ ಮಾಡುವ ಮುನ್ನ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಪ್ರಸ್ತಾಪವಾಗಿವೆ. ಇದೆಲ್ಲದರ ಬಗ್ಗೆ ತಾವು ಮುಕ್ತ ಮನಸ್ಸು ಹೊಂದಿರುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿಗಳು ಪರೋಕ್ಷವಾಗಿ ಸಹಮತ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೂ ಮೊದಲು ಉಪಮುಖ್ಯಮಂತ್ರಿ ಪರಮೇಶ್ವರ್‌ ನಿವಾಸದಲ್ಲಿ ಉಪಾಹಾರ ಸಭೆ ನಡೆಸಿದ ಕಾಂಗ್ರೆಸ್‌ ನಾಯಕರು, ಲೋಕಸಭಾ ಚುನಾವಣೆ ಫಲಿತಾಂಶವು ರಾಜ್ಯ ಮೈತ್ರಿ ಕೂಟ ಸರ್ಕಾರದ ಮೇಲೆ ಬೀರುವ ಪರಿಣಾಮ ಕುರಿತು ವಿವರವಾಗಿ ಚರ್ಚಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಯಾವುದೇ ರೀತಿಯ ಪ್ರಯತ್ನಗಳಿಗೆ ಕೈ ಹಾಕದೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿಯ ಆಮಿಷಗಳಿಗೆ ಒಳಗಾಗುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಅತೃಪ್ತ ಶಾಸಕರನ್ನು ಓಲೈಸಲು ಪ್ರಯತ್ನಿಸಬೇಕು. ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಸಭೆ ತೀರ್ಮಾನಿಸಿತು.

ಮೂಲಗಳ ಪ್ರಕಾರ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದರೂ ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿರುವ ಅತೃಪ್ತ ಶಾಸಕರ ವಲಸೆಯನ್ನು ತಡೆಯುವುದು ಕಷ್ಟಎಂಬ ಭಾವನೆಯಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಕಷ್ಟವಿರುವ ಹಿನ್ನೆಲೆಯಲ್ಲಿ ಸಂದರ್ಭ ನಿರ್ಮಾಣವಾದರೆ ಪ್ರತಿಪಕ್ಷದಲ್ಲಿ ಕೂರಲು ಕಾಂಗ್ರೆಸ್‌ ನಾಯಕರು ಮಾನಸಿಕವಾಗಿ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದು ಭೇಟಿ ಮಾಡಿದ ಎಚ್‌ಡಿಕೆ :  ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಶುಕ್ರವಾರ ರಾತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಅವರು ನಿಮ್ಮ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಮುಂದುವರೆಯಬೇಕು. ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುನ್ನಡೆಯೋಣ ಎಂಬ ಮಾತನ್ನು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಏನೇನು ಕ್ರಮ?

1. ಅತೃಪ್ತರ ಜೊತೆ ಸಭೆ ನಡೆಸಿ ಅವರನ್ನು ಸಮಾಧಾನಪಡಿಸುವುದು

2. ನಿಗಮ, ಮಂಡಳಿ ಮತ್ತಿತರ ಸಂಸ್ಥೆಗಳಲ್ಲಿ ಹುದ್ದೆಗಳನ್ನು ನೀಡುವುದು

3. ಶಾಸಕರ ಕ್ಷೇತ್ರಗಳಲ್ಲಿ ಅನುದಾನ ತಾರತಮ್ಯ ಹೋಗಲಾಡಿಸುವುದು

4. ‘ಮುಖ್ಯ ಅತೃಪ್ತ’ ರಮೇಶ್‌ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವುದು

5. ಉಭಯ ಪಕ್ಷಗಳ ಶಾಸಕರ ನಡುವೆ ಬಾಂಧವ್ಯ ವೃದ್ಧಿ ಮಾಡುವುದು