ಬೆಂಗಳೂರು :  ರಾಜ್ಯದಲ್ಲಿ 2ನೇ ಹಾಗೂ ಅಂತಿಮ ಹಂತದ ಲೋಕಸಭಾ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ನ ಅತೃಪ್ತ ಶಾಸಕ ರಮೇಶ್‌ ಜಾರಕಿಹೊಳಿ ಹಾಕಿದ ‘ರಾಜೀನಾಮೆ ಬಾಂಬ್‌’ ಸ್ಫೋಟಿಸಿ ರಾಜ್ಯದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಮೇ 23ರೊಳಗೆ ಕುತ್ತು ತರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.

ರಮೇಶ್‌ ಜಾರಕಿಹೊಳಿ ತಾವೊಬ್ಬರೇ ರಾಜೀನಾಮೆ ನೀಡುವ ಬದಲು ತಮ್ಮ ಆಪ್ತ ಶಾಸಕರನ್ನೂ ಜತೆಗೂಡಿ ಸಾಮೂಹಿಕ ರಾಜೀನಾಮೆ ನೀಡಲು ಕಸರತ್ತು ನಡೆಸಿದ್ದಾರೆ. ಆದರೆ, ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ರಾಜೀನಾಮೆ ನೀಡುವ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದಾರೆ. ಬಿಜೆಪಿ ದೊಡ್ಡ ಗೆಲುವು ಸಾಧಿಸಿದರೆ ರಾಜೀನಾಮೆ ನೀಡುವುದು, ಇಲ್ಲವಾದಲ್ಲಿ ಕಾಂಗ್ರೆಸ್ಸಲ್ಲೇ ಇರುವುದು ಎಂಬ ಚಿಂತನೆಯಲ್ಲಿ ಅತೃಪ್ತರು ಇದ್ದಾರೆ ಎನ್ನಲಾಗಿದೆ. ಇದೇ ವೇಳೆ, ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುವವರೆಗೆ ಪರ್ಯಾಯ ಸರ್ಕಾರ ರಚಿಸಲು ಬಿಜೆಪಿ ಆಸಕ್ತಿ ಹೊಂದಿಲ್ಲ ಎಂದು ತಿಳಿದು ಬಂದಿದೆ. ಈ ಎಲ್ಲ ಕಾರಣಗಳಿಂದಾಗಿ ಮೇ 23ರಂದು ಹೊರಬೀಳಬೇಕಿರುವ ಲೋಕಸಭಾ ಚುನಾವಣೆ ಫಲಿತಾಂಶದ ವರೆಗೆ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಕುತ್ತು ಉಂಟಾಗದು ಎಂದು ವಿಶ್ಲೇಷಿಸಲಾಗುತ್ತಿದೆ.

ಫಲಿತಾಂಶ ಬಳಿಕ ನಿರ್ಧಾರ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಬೇಕು ಮತ್ತು ರಾಜ್ಯದಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗಳಿಸಬೇಕು. ಇವೆರಡೂ ಕಾರ್ಯಗತಗೊಂಡಿದ್ದು ಖಾತ್ರಿಯಾದರಷ್ಟೇ ಕಾಂಗ್ರೆಸ್‌ನ ಅತೃಪ್ತ ಶಾಸಕರು ತಮ್ಮ ಪಕ್ಷ ತೊರೆದು ಬಿಜೆಪಿಗೆ ವಲಸೆ ಹೋಗಲು ಮನಸ್ಸು ಮಾಡುವ ನಿರೀಕ್ಷೆಯಿದೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಗಳಿಸಿ ಕೇಂದ್ರದಲ್ಲಿ ಮೋದಿ ಸರ್ಕಾರವೇ ಬಂದರೂ ಅತೃಪ್ತ ಶಾಸಕರು ಪಕ್ಷ ತೊರೆಯುವ ಸಂಭವ ಕಡಿಮೆ ಎನ್ನಲಾಗುತ್ತಿದೆ.

ಯಾಕೆಂದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ಉಪಚುನಾವಣೆ ಎದುರಿಸಬೇಕಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಗೆಲುವು ಸಾಧಿಸದೇ ಹೋದಲ್ಲಿ ಉಪಚುನಾವಣೆಯಲ್ಲಿ ತಮ್ಮ ಗೆಲುವು ಅಷ್ಟುಸುಲಭ ಸಾಧ್ಯವಲ್ಲ. ಅಂತಹ ಸನ್ನಿವೇಶದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋಗುವುದಕ್ಕಿಂತ ಪಕ್ಷದಲ್ಲೇ ಇದ್ದು ಅಲ್ಲೇ ಹೊಂದಾಣಿಕೆ ಮತ್ತು ಚೌಕಾಶಿ ಮಾಡಿಕೊಂಡು ಮುಂದುವರಿಯುವ ಲೆಕ್ಕಾಚಾರದಲ್ಲಿ ಅತೃಪ್ತ ಶಾಸಕರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಗೆ ಸದ್ಯ ಆಸಕ್ತಿ ಇಲ್ಲ:  ಇದೆಲ್ಲದರ ನಡುವೆ ಬಿಜೆಪಿ ಕೂಡ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವವರೆಗೆ ರಾಜ್ಯದಲ್ಲಿ ಪರ್ಯಾಯ ಸರ್ಕಾರ ರಚಿಸುವ ಬಗ್ಗೆ ಆಸಕ್ತಿ ಹೊಂದಿಲ್ಲ. ಮೇ 19ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಇನ್ನುಳಿದ ಹಂತಗಳ ಲೋಕಸಭಾ ಚುನಾವಣೆ ನಡೆಯಲಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿ ಹೊರಬಂದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಅದರ ಕಳಂಕವನ್ನು ತಮ್ಮ ತಲೆಗೇ ಕಟ್ಟುವ ಪ್ರಯತ್ನ ಮಾಡಬಹುದು ಎಂಬ ಆತಂಕ ಬಿಜೆಪಿ ನಾಯಕರಿಗಿದೆ. ಹೀಗಾಗಿ, ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಫಲಿತಾಂಶ ಹೊರಬೀಳುವವರೆಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆದರೆ, ಅಷ್ಟರೊಳಗಾಗಿ ಅತೃಪ್ತ ಶಾಸಕರನ್ನು ಸಮಾಧಾನಪಡಿಸುವ ಮೂಲಕ ತಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ನಡೆಸಬಹುದು. ಅದರಲ್ಲಿ ಯಶಸ್ವಿಯಾದಲ್ಲಿ ಬಿಜೆಪಿ ಪರ್ಯಾಯ ಸರ್ಕಾರ ರಚಿಸುವ ಸಾಧ್ಯತೆ ಇಲ್ಲವಾಗಬಹುದು.