Asianet Suvarna News Asianet Suvarna News

ಲೋಕಸಭಾ ಚುನಾವಣೆಗೆ ಮತ್ತೊಂದು ಮಹಾ ಮೈತ್ರಿ

2019ರ ಲೋಕಸಭೆ ಚುನಾವಣೆಗೆ ಈಗಲೇ ತಾಲೀಮು ಆರಂಭಿಸಿರುವ ಜೆಡಿಎಸ್‌, ಪ್ರಬಲ ಬಿಜೆಪಿಯನ್ನು ಮಣಿಸಬೇಕಾದರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಆದ್ದರಿಂದ ಈಗಿನಿಂದಲೇ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಪ್ಲಾನ್ ಮಾಡುತ್ತಿವೆ. 

JDS And Congress Prepare For Lok Sabha Election 2019
Author
Bengaluru, First Published Sep 28, 2018, 10:27 AM IST

ಬೆಂಗಳೂರು :  ಮುಂದಿನ ವರ್ಷದ ಲೋಕಸಭೆ ಅಖಾಡದಲ್ಲಿ ಎದುರಾಳಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಪಕ್ಷಗಳು ಇದೀಗ ಸ್ಥಳೀಯ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿಕೊಂಡು ಚುನಾವಣಾ ಕಣಕ್ಕಿಳಿಯಲು ಚಿಂತನೆ ನಡೆಸಿವೆ.

2019ರ ಲೋಕಸಭೆ ಚುನಾವಣೆಗೆ ಈಗಲೇ ತಾಲೀಮು ಆರಂಭಿಸಿರುವ ಜೆಡಿಎಸ್‌, ಪ್ರಬಲ ಬಿಜೆಪಿಯನ್ನು ಮಣಿಸಬೇಕಾದರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಕಾಯ್ದುಕೊಳ್ಳಲು ರಚಿಸಿಕೊಂಡಿರುವ ರಾಜ್ಯಮಟ್ಟದ ಸಮನ್ವಯ ಸಮಿತಿಯಂತೆ ಸ್ಥಳೀಯ ಮಟ್ಟದಲ್ಲಿಯೂ ಅಲ್ಲಿನ ನಾಯಕರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಬೇಕಾದ ಅಗತ್ಯ ಇದೆ ಎಂಬ ಪ್ರತಿಪಾದನೆಯನ್ನು ಜೆಡಿಎಸ್‌ ಮುಂದಿಟ್ಟಿದೆ.

ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜ್ಯಮಟ್ಟದ ಮುಖಂಡರು ತೀರ್ಮಾನ ಕೈಗೊಂಡರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬ ಸತ್ಯವನ್ನು ಜೆಡಿಎಸ್‌ ಮನಗಂಡಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಮಟ್ಟದ ನಾಯಕರಲ್ಲಿಯೂ ಸಮನ್ವಯ ಸಾಧಿಸಿ ಚುನಾವಣೆ ಎದುರಿಸುವುದು ಸೂಕ್ತ ಎಂಬ ಆಲೋಚನೆ ನಡೆಸಿದೆ.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ಈ ನಿಟ್ಟಿನಲ್ಲಿ ತಮ್ಮದೇ ಶೈಲಿಯಲ್ಲಿ ಕೆಲಸ ಆರಂಭಿಸಿದ್ದು, ಪಕ್ಷಗಳ ವಾಸ್ತವ ಸ್ಥಿತಿ ಕುರಿತು ಜಿಲ್ಲಾವಾರು ಮಾಹಿತಿ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಹೋಗಲು ಈಗಾಗಲೇ ಕಾಂಗ್ರೆಸ್‌-ಜೆಡಿಎಸ್‌ ವರಿಷ್ಠರು ತೀರ್ಮಾನಿಸಿದ್ದಾರೆ. ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದು, ಕಾರ್ಯತಂತ್ರ ಹೆಣೆಯಲು ಜೆಡಿಎಸ್‌ ರಾಜ್ಯಾಧ್ಯಕ್ಷರು ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಉಭಯ ಪಕ್ಷಗಳ ಸ್ಥಳೀಯ ಮಟ್ಟದ ನಾಯಕರ ಅಭಿಪ್ರಾಯ ಸಂಗ್ರಹಕ್ಕಾಗಿ ಜಿಲ್ಲಾವಾರು ಸಮನ್ವಯ ಸಮಿತಿ ರಚಿಸಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ ಮಾತ್ರ ಬಿಜೆಪಿಯನ್ನು ಸೋಲಿಸಬಹುದು. ಇಲ್ಲವಾದಲ್ಲಿ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ವಿಶ್ವನಾಥ್‌ ಮನದಟ್ಟು ಮಾಡಿದ್ದಾರೆ.

ಜಿಲ್ಲಾವಾರು ಸಮಿತಿ ರಚಿಸುವ ಬಗ್ಗೆ ಸರ್ಕಾರದ ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಇತರರು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕಿದೆ.

10 ಸ್ಥಾನಗಳಲ್ಲಿ ಸ್ಪರ್ಧೆಗೆ ಯತ್ನ:

ಲೋಕಸಭೆ ಚುನಾವಣೆಗೆ ಜೆಡಿಎಸ್‌ ರಾಜ್ಯದ 10 ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ಹಳೆ ಮೈಸೂರು ಪ್ರಾಂತ್ಯ ಸೇರಿದಂತೆ ಪಕ್ಷ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಪಕ್ಷದಲ್ಲಿಯೇ ಚರ್ಚಿಸಲಾಗುತ್ತಿದೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌ ಸಹ ಪ್ರಬಲ ಇರುವ ಕಾರಣ ಮೈತ್ರಿಕೂಟ ಪಕ್ಷದ ಮುಖಂಡರು ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ರಾಯಚೂರು, ಬೀದರ್‌ ಸೇರಿದಂತೆ ಕೆಲವು ಜಿಲ್ಲೆಯಲ್ಲಿ ಜೆಡಿಎಸ್‌ ತನ್ನದೇ ಉಸ್ತುವಾರಿ ಸಚಿವರಿದ್ದಾರೆ. ಹೀಗಾಗಿ ಆ ಕ್ಷೇತ್ರವನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಮುಂಬೈ-ಕರ್ನಾಟಕ ಭಾಗದಲ್ಲಿ ಪಕ್ಷದ ಸ್ಥಿತಿ ಅಷ್ಟೇನು ಇಲ್ಲ. ಹೀಗಾಗಿ ಜೆಡಿಎಸ್‌ ಅಧಿಕಾರದಲ್ಲಿದ್ದ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಬರುವ ಜಿಲ್ಲೆಯಲ್ಲಿ ತನ್ನ ಸಾಧನೆಯನ್ನು ಬಿಂಬಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಚಾರವನ್ನು ಗಿಟ್ಟಿಸಿಕೊಳ್ಳುವಲ್ಲಿ ಜೆಡಿಎಸ್‌ ವಿಫಲವಾಗಿದೆ. ಇದೀಗ ಜನರಿಗೆ ನೆನಪಿಸಿಕೊಳ್ಳುವ ಅಗತ್ಯತೆ ಇದೆ ಎಂಬುದನ್ನು ಅರಿತ ಜೆಡಿಎಸ್‌ ಮುಖಂಡರು ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ. ಕೊಪ್ಪಳ, ಬಿಜಾಪುರ ಸೇರಿದಂತೆ ಮುಂಬೈ-ಕರ್ನಾಟಕದ ಭಾಗದಲ್ಲಿ ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯುವುದು ಉತ್ತಮ ಎಂಬ ಲೆಕ್ಕಾಚಾರದಲ್ಲಿ ಪಕ್ಷವು ತೊಡಗಿದೆ. ಲೋಕಸಭೆ ಚುನಾವಣೆಗೆ ಇನ್ನು ಕಾಲಾವಕಾಶ ಇರುವ ಕಾರಣ ತನ್ನ ಆಲೋಚನೆಗಳನ್ನು ಕಾಂಗ್ರೆಸ್‌ನ ಮುಂದಿಟ್ಟು ಚರ್ಚಿಸಿ ಒಮ್ಮತ ನಿರ್ಧಾರ ಕೈಗೊಂಡು ಚುನಾವಣೆ ಎದುರಿಸಲು ಪಕ್ಷವು ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ವರಿಷ್ಠರು ಮೈತ್ರಿಕೂಟದಲ್ಲಿ ಎದುರಿಸುವ ಬಗ್ಗೆ ಈಗಾಗಲೇ ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಸ್ಥಾನ ಹಂಚಿಕೆ ಬಗ್ಗೆ ಕಾಂಗೆಸ್‌ ಜತೆಗೆ ಇನ್ನೂ ಚರ್ಚೆ ನಡೆದಿಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದಾರೆ. ಎರಡು ಪಕ್ಷಗಳ ಸ್ಥಳೀಯ ನಾಯಕರ ಒಮ್ಮತದ ಮೇರೆಗೆ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

-ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

ಪ್ರಭುಸ್ವಾಮಿ ನಟೇಕರ್‌

Follow Us:
Download App:
  • android
  • ios