ಬೆಂಗಳೂರು/ಹಾಸನ :  ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗಳ ಫಲಿತಾಂಶ ಮುಂಬರುವ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು 28 ಕ್ಷೇತ್ರಗಳಲ್ಲೂ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂಥ ವೇದಿಕೆಯನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಬೆಂಗಳೂರು ಮತ್ತು ಹಾಸನದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣದಲ್ಲೂ ಬಿಜೆಪಿಯೇತರ ಪಕ್ಷಗಳು ಒಂದಾಗಿ ಹೋರಾಟ ಮಾಡುವ ಸನ್ನಿವೇಶ ಸೃಷ್ಟಿಸಲಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಬಿಜೆಪಿ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭೂತಕಾಲದ ಘಟನೆಗಳನ್ನು ನೆನಪಿಸಿಕೊಳ್ಳದೆ ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಮಾತ್ರ ಚಿಂತನೆ ನಡೆಸಿ ಎಂದು ಬಿಜೆಪಿಯೇತರ ಪಕ್ಷಗಳಿಗೆ ಈಗಾಗಲೇ ಸಲಹೆ ಮಾಡಿದ್ದಾರೆ ಎಂದರು.

ಈ ಉಪಚುನಾವಣೆ ಸೆಮಿಫೈನಲ್‌ ಎಂಬ ಮಾತನ್ನು ಹಿಂದೆಯೇ ನಾನು ಹೇಳಿದ್ದೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಕೆಲವು ಸಣ್ಣಪುಟ್ಟಸಮಸ್ಯೆ ಇದ್ದರೂ ಈ ಉಪಚುನಾಣೆಯಲ್ಲಿ ಪರಸ್ಪರ ಸಹಕಾರದಿಂದ ಮುನ್ನಡೆದಿದ್ದೇವೆ. ಚುನಾವಣೆ ಗೆಲ್ಲಲೇಬೇಕು ಎಂಬ ಸವಾಲನ್ನು ಸ್ವೀಕರಿಸಿ ಸಾಕಷ್ಟುಹೊಂದಾಣಿಕೆ ಮಾಡಿಕೊಂಡಿದ್ದೇವೆ. ಉಭಯ ಪಕ್ಷಗಳ ಮುಖಂಡರೆಲ್ಲರೂ ಕುಳಿತು ಸಮಾಲೋಚನೆ ಮಾಡಿಯೇ ತೀರ್ಮಾನ ಮಾಡಿರುವುದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ ಎಂದು ವಿವರಿಸಿದರು.

ಸಮ್ಮಿಶ್ರ ಸರ್ಕಾರಕ್ಕೆ ಈ ಉಪಚುನಾವಣೆ ತುಂಬಾ ಮುಖ್ಯವಾದದ್ದು. ನಮ್ಮ ಸರ್ಕಾರ ಭದ್ರವಾಗಿದೆ ಎಂಬುದನ್ನು ಜನಕ್ಕೆ ತೋರಿಸಬೇಕಾಗಿದೆ. ಉತ್ತಮ ಫಲಿತಾಂಶ ಬಂದರೆ ಅಧಿಕಾರಿಗಳು ಭಯದಿಂದ ಕೆಲಸ ಮಾಡುತ್ತಾರೆ ಎಂದೂ ಅವರು ಇದೇ ವೇಳೆ ಹೇಳಿದರು.

‘ಆಪರೇಷನ್‌ ಕಮಲ’ ಕಗ್ಗೊಲೆ ಅಲ್ಲವೇ:

ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದನ್ನು ಮುಂದಿಟ್ಟುಕೊಂಡು, ‘ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿವೆ’ ಎಂದು ಬಿಜೆಪಿ ಆರೋಪ ಮಾಡಿದೆ. ಈ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ನ 20ರಿಂದ 30 ಮಂದಿ ಶಾಸಕರನ್ನು ಆಪರೇಷನ್‌ ಕಮಲ ಮಾಡಿ ಸೆಳೆದುಕೊಂಡಿದ್ದು ಪ್ರಜಾಪ್ರಭುತ್ವದ ಕಗ್ಗೂಲೆಯಲ್ಲವೇ ಎಂದು ಕುಮಾರಸ್ವಾಮಿ ಖಾರವಾಗಿ ನುಡಿದರು.

ಈಗಲೂ ಕೋಟಿ ಕೋಟಿ ಆಮಿಷವೊಡ್ಡಿ ಆಡಳಿತ ಪಕ್ಷಗಳ ಶಾಸಕರಿಂದ ರಾಜೀನಾಮೆ ಕೊಡಿಸಲು ಯತ್ನಿಸಿ, ದಿನಾಂಕ ಫಿಕ್ಸ್‌ ಮಾಡುತ್ತಿರುವ ನಡೆಯನ್ನು ಏನೆಂದು ಕರೆಯಬೇಕು ಎಂದು ಕಿಡಿಕಾರಿದರು.

ರೈತರ ಬೃಹತ್‌ ಸಮಾವೇಶ:

ಉಪಚುನಾವಣೆ ಮುಗಿದ ಬಳಿಕ ಮುಂದಿನ ತಿಂಗಳಲ್ಲಿ ರೈತರ ಬೃಹತ್‌ ಸಮಾವೇಶ ಏರ್ಪಡಿಸಿ ಸಾಲಮನ್ನಾಗೆ ಸಂಬಂಧಿಸಿದಂತೆ ಋುಣಮುಕ್ತ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಪುನರುಚ್ಚರಿಸಿದರು.

ಆನ್‌ಲೈನ್‌ ಮದ್ಯ ಮಾರಾಟ ಇಲ್ಲ?

ಆನ್‌ಲೈನ್‌ ಮೂಲಕ ಮದ್ಯ ಮಾರಾಟ ಮಾಡುವುದು ಸರಿಯಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ಬಗ್ಗೆ ಪರಿಶೀಲಿಸಿದ ನಂತರ ಅವಶ್ಯಕತೆ ಬಿದ್ದರೆ ಈ ವ್ಯವಸ್ಥೆಗೆ ತಡೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಈಗ ಚಿಕ್ಕಚಿಕ್ಕ ಮಕ್ಕಳೂ ಆನ್‌ಲೈನ್‌ ಬಳಕೆ ಮಾಡುತ್ತಿದ್ದಾರೆ. ಹೀಗಿದ್ದಾಗ ಆನ್‌ಲೈನ್‌ ಮೂಲಕ ಮದ್ಯ ಖರೀದಿ ಮಾಡುವ ವ್ಯವಸ್ಥೆ ಜಾರಿಯಾದರೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಆನ್‌ಲೈನ್‌ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ಕೊಡುವ ಹಿಂದಿನ ಸರ್ಕಾರದ ತೀರ್ಮಾನದ ಕಡತ ತರಲು ಹೇಳಿದ್ದೇನೆ ಎಂದರು.

ಪ್ರಧಾನಿ ಹೆಸರು ಈಗ ಅಪ್ರಸ್ತುತ

ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆ ಈಗ ಅಪ್ರಸ್ತುತ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿ ಅನೇಕ ಮಂದಿ ಪ್ರಧಾನಿಯಾಗುವಷ್ಟುಸಮರ್ಥರಿದ್ದಾರೆ. ಹೀಗಾಗಿ ಈ ಪ್ರಶ್ನೆ ಈಗ ಸರಿಯಲ್ಲ.

ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ