ಮೊನ್ನೆಯಷ್ಟೇ ಸಿಎಂ ಸ್ಥಾನದಿಂದ ಕೆಳಗಿಳಿದಿರುವ ಪನ್ನೀರ್ ಸೆಲ್ವಂ ಶಶಿಕಲಾ ನಟರಾಜನ್ಗೆ ಈಗಾಗಲೇ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ.
ಚೆನ್ನೈ(ಫೆ.08): ಜಯಾ ಸಮಾಧಿ ಮುಂದೆ ಕಣ್ಣೀರಿಟ್ಟು ಸಿಎಂ ಸ್ಥಾನದಿಂದ ರಾಜೀನಾಮೆ ನೀಡಿದ ಕಾರಣವನ್ನು ಮಾಜಿ ಮುಖ್ಯಂತ್ರಿ ಪನ್ನೀರ್ ಸೆಲ್ವಂ ಬಿಚ್ಚಿಟ್ಟಿದ್ದಾರೆ. 'ಮುಖ್ಯಮಂತ್ರಿಯಾಗಿ ಮುಂದುವರಿವಂತೆ ಅಮ್ಮ ಹೇಳಿದ್ದರು.ಕೇಂದ್ರದ ನಾಯಕರು ಕೂಡಾ ಸಿಎಂ ಆಗಲು ಸೂಚಿಸಿದ್ದರು. ಆದರೆ ಕೆಲವೊಂದು ಘಟನೆಗಳಿಂದ ತುಂಬಾ ನೋವಾಗಿದೆ. ಕೆಲವೊಂದು ಸತ್ಯಗಳನ್ನು ಹೇಳಬೇಕಾಗಿದೆ ಎಂದು ನೋವಿನಿಂದ ಹೇಳಿದ್ದಾರೆ.
'ಶಶಿಕಲಾ ತಂಡದಿಂದ ನನ್ನ ಮೇಲೆ ಒತ್ತಡ ಇದೆ. ಅಮ್ಮನ ಸಮಾಧಿ ಬಳಿ ಸತ್ಯ ಹೇಳಲು ಬಂದಿದ್ದೇನೆ. ಅಮ್ಮನ ಆತ್ಮ ಸಮಾಧಿ ಬಳಿ ನನ್ನನ್ನು ಕರೆಸಿಕೊಂಡಿದೆ. ನಾನು ಸಿಎಂ ಆಗಿ ಮುಂದುವರೆಯಲು ಅಮ್ಮನ ಆಸೆಯಾಗಿತ್ತು'. ನಾನು ಒತ್ತಡದಿಂದ ರಾಜೀನಾಮೆ ನೀಡಿದ್ದೇನೆ. ಸಿಎಂ ಸ್ಥಾನಕ್ಕೆ ಕೊಟ್ಟ ರಾಜೀನಾಮೆ ಹಿಂಪಡೆಯಲು ನಾನು ಸಿದ್ಧ. ದೇಶದ ಜನತೆಗೆ ಸತ್ಯ ಹೇಳುವಂತೆ ಅಮ್ಮನ ಆತ್ಮ ಪ್ರೇರಣೆ ನೀಡಿದೆ. ಕೊನೆವರೆಗೂ ಏಕಾಂಗಿಯಾಗಿ ಹೋರಾಡಲು ನಾನು ಸಿದ್ಧ. ಅಮ್ಮ ಕೊಟ್ಟ ಭರವಸೆಗಳನ್ನು ಈಡೇರಿಸಬೇಕಾಗಿದೆ. ಎಐಎಡಿಎಂಕೆ ಪಕ್ಷ ಮತ್ತು ರಾಜ್ಯವನ್ನು ಉಳಿಸಬೇಕಾಗಿದೆ.ಕಾರ್ಯಕರ್ತರಿಗೆ ಸತ್ಯ ಹೇಳುವಂತೆ ಅಮ್ಮನ ಆತ್ಮ ಸೂಚಿಸಿದೆ ಎಂದು ತಿಳಿಸಿದ್ದಾರೆ.
ಮೊನ್ನೆಯಷ್ಟೇ ಸಿಎಂ ಸ್ಥಾನದಿಂದ ಕೆಳಗಿಳಿದಿರುವ ಪನ್ನೀರ್ ಸೆಲ್ವಂ ಶಶಿಕಲಾ ನಟರಾಜನ್ಗೆ ಈಗಾಗಲೇ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಚೆನ್ನೈನ ಮರೀನಾ ಬೀಚ್ ಸಮೀಪದಲ್ಲಿರುವ ಜಯಾ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಅರ್ಧ ಗಂಟೆ ಕುಳಿತು ಧ್ಯಾನ ಮಾಡಿದರು. ಈ ಸಂದರ್ಭದಲ್ಲಿ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು.
