ತಮಿಳಿನ ಆರಾಧ್ಯ ದೇವತೆಗೆ ಸಕಲ ಸರ್ಕಾರಿ ಗೌರವಗಳನ್ನು ನೀಡಿ ನಂತರ ಶ್ರೀಗಂಧದಲ್ಲಿ ತಯಾರಿಸಲಾದ ಪೆಟ್ಟಿಗೆಯಲ್ಲಿ ಸಂಜೆ 6.45ರ ವೇಳೆಗೆ ಅಂತಿಮ ವಿದಾಯ ಹೇಳಲಾಯಿತು. ಆಪ್ತ ಗೆಳತಿ ಶಶಿಕಲಾ ನಟರಾಜನ್ ಹಾಗೂ ಅವರ ಪುತ್ರ ಪುರೋಹಿತರ ಮಾರ್ಗದರ್ಶನದೊಂದಿಗೆ ನ ವೈಷ್ಣವ ಸಂಪ್ರದಾಯದ ಮೂಲಕ ವಿಧಿವಿಧಾನ ನೇರವೇರಿಸಿದರು
ಚೆನ್ನೈ(ಡಿ.6): ದಶಕಗಳ ಕಾಲ ಚಿತ್ರರಂಗವನ್ನು ಆಳಿದ ದಕ್ಷಿಣ ಚಿತ್ರರಂಗದ ಪ್ರಸಿದ್ಧ ಸಿನಿಮಾ ತಾರೆ, ತಮಿಳುನಾಡಿನ ಕೋಟ್ಯಂತರ ಜನರ ಮನಗೆದ್ದು ಅವರಿಗೆಲ್ಲ ದಾರಿದೀಪವಾಗಿದ್ದ ಮುಖ್ಯಮಂತ್ರಿ ಜಯಲಲಿತಾ ಅವರು ಇನ್ನು ನೆನಪು ಮಾತ್ರ. ಲಕ್ಷಾಂತರ ಅಭಿಮಾನಿಗಳ ಭಾವಪೂರ್ಣ ಶ್ರದ್ಧಾಂಜಲಿಯೊಂದಿಗೆ ವೈಷ್ಣವ ಸಂಪ್ರದಾಯದಂತೆ ಚೆನ್ನೈನ ಮರೀನ ಬೀಚ್ ಬಳಿ ಕೋಮಲವಲ್ಲಿ ಅವರನ್ನು ರಾಜಕೀಯ ಗುರು ಎಂಜಿಆರ್ ಅವರ ಸಮಾಧಿ ಪಕ್ಕದಲ್ಲಿ ಮಣ್ಣು ಮಾಡಲಾಯಿತು.
ಜಯಲಲಿತಾ ಅವರ ಮೃತದೇಹವನ್ನುಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಮರೀನಾ ಬೀಚ್ ಬಳಿಗೆ ತೆರದ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು. ಮೃತದೇಹ ಸಾಗುವ ಮಾರ್ಗದುದ್ದಕ್ಕೂ ಸಾವಿರಾರು ಜನ ಪಾಲ್ಗೊಂಡು ಅಮ್ಮನ ದರ್ಶನ ಪಡೆದರು.ತಮಿಳಿನ ಆರಾಧ್ಯ ದೇವತೆಗೆ ಸಕಲ ಸರ್ಕಾರಿ ಗೌರವಗಳನ್ನು ನೀಡಿ ನಂತರ ಶ್ರೀಗಂಧದಲ್ಲಿ ತಯಾರಿಸಲಾದ ಪೆಟ್ಟಿಗೆಯಲ್ಲಿ ಸಂಜೆ 6.45ರ ವೇಳೆಗೆ ಅಂತಿಮ ವಿದಾಯ ಹೇಳಲಾಯಿತು. ಆಪ್ತ ಗೆಳತಿ ಶಶಿಕಲಾ ನಟರಾಜನ್ ಹಾಗೂ ಅವರ ಪುತ್ರ ಪುರೋಹಿತರ ಮಾರ್ಗದರ್ಶನದೊಂದಿಗೆ ನ ವೈಷ್ಣವ ಸಂಪ್ರದಾಯದ ಮೂಲಕ ವಿಧಿವಿಧಾನ ನೇರವೇರಿಸಿದರು.
ಅಂತಿಮ ಸಂಸ್ಕಾರ ಕೈಗೊಳ್ಳುವ ಕೊನೆ ಕ್ಷಣದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಬ್ ನಬಿ ಆಜಾದ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ್ ರಾವ್, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಜಯ ಅವರಿಂದ ರಾಜಕೀಯ ದೀಕ್ಷೆ ಪಡೆದು ಮುಖ್ಯಮಂತ್ರಿಯಾದ ಓ.ಪನ್ನೀರ್ ಸೆಲ್ವಂ ಸೇರಿದಂತೆ ಹಲವರು ದೇಶ ಕಂಡ ಅಪ್ರತಿಮ ನಾಯಕಿಗೆ ಅಂತಿಮ ನಮನ ಸಲ್ಲಿಸಿದರು.
ಬೆಳಿಗ್ಗೆ 8.30ರಿಂದ ಸಂಜೆ 4.30 ರವರೆಗೂ ರಾಜಾಜಿ ಹಾಲ್'ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ,ಮಾಜಿ ಪ್ರಧಾನಿ ದೇವೇಗೌಡ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಸಿನಿಮಾ ದಿಗ್ಗಜರಾದ ರಜಿನಿಕಾಂತ್, ಬಿ.ಸರೋಜಾದೇವಿ, ಪ್ರಭು, ಸೂರ್ಯ, ಕಾರ್ತಿಕ್, ಸುವಾಸಿನಿ ಸೇರಿದಂತೆ ಸಾವಿರಾರು ಗಣ್ಯರು, ಲಕ್ಷಾಂತರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
ಜಾತಿ ಸೋಂಕಿಲ್ಲದೇ ದ್ರಾವಿಡ ಪದ್ಧತಿ ಪಾಲನೆ
ಸಿನಿಮಾ,ರಾಜಕೀಯ ಕ್ಷೇತ್ರದಲ್ಲಿ ಸ್ಥಾಪಿತವಾಗಿದ್ದ ನಂಬಿಕೆ,‘ಪರಿಭಾಷೆ’ಗಳನ್ನು ಬದಲಿಸಿ, ತಮ್ಮದೇ ವರ್ಚಸ್ಸನ್ನು ಸೃಷ್ಟಿಸಿದ್ದ ಜಯಲಲಿತಾ ‘ನಿರ್ಗಮನ’ವೂ ಜಾತಿ ಮೂಲದ ನಂಬಿಕೆಗಳನ್ನು ಕದಲಿಸಿದೆ. ಜಯಾ ಹೆತ್ತವರು ಶ್ರೀವೈಷ್ಣವ ಅಯ್ಯಂಗಾರ್ ಸಮುದಾಯಕ್ಕೆ ಸೇರಿದವರು.ದೇವರು,ನಂಬಿಕೆ ವಿಷಯದಲ್ಲಿ ಅಪರಿಮಿತ ಶ್ರದ್ಧಾಳುವಾಗಿದ್ದ ಅವರು ಜಾತಿ ಚಹರೆಗಳನ್ನು ಯಾವತ್ತೂ ವಿಜೃಂಭಿಸಿಕೊಂಡವರಲ್ಲ. ಆದಾಗ್ಯೂ,ಶ್ರೀವೈಷ್ಣವ ಸಂಪ್ರದಾಯಕ್ಕನುಗುಣವಾಗಿ ಅಗ್ನಿಸ್ಪರ್ಶದ ಮೂಲಕ ಅಂತ್ಯಕ್ರಿಯೆ ನಡೆಯುತ್ತದೆಂದು ಚರ್ಚಿಸಲಾಗುತ್ತಿತ್ತು.ಆದರೆ, ದ್ರಾವಿಡ ಪದ್ಧತಿಯಂತೆ ಹೂಳಲಾಯಿತು.
‘‘ಮಣ್ಣು ಮಾಡುವುದು ಶ್ರೀವೈಷ್ಣವರ ಪದ್ಧತಿಯಲ್ಲ. ನಮ್ಮಲ್ಲಿ ಅಗ್ನಿಸ್ಪರ್ಶ ಮಾಡಲಾಗುತ್ತದೆ. ವಿವಾಹಿತ ಮಹಿಳೆಯ ಅಂತ್ಯಸಂಸ್ಕಾರಕ್ಕೂ, ಕನ್ಯೆಯಾಗುಳಿದವರ ಸಂಸ್ಕಾರ ಪದ್ಧತಿಗೂ ವ್ಯತ್ಯಾಸವಿದೆ’’ಎನ್ನುತ್ತಾರೆ ಮೈಸೂರು ಪರಕಾಲಮಠದ ಶ್ರಾದ್ಧ ಪಂಡಿತ ರಂಗನ್ ಅಯ್ಯಂಗಾರ್. ‘‘ದಹನಕ್ಕೆ ಮುನ್ನ ಎದೆಯ ಮೇಲೆ ಅಗ್ನಿಹೋಮ ನೆರವೇರಿಸಿ ಅದರಿಂದಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತೆ. ಶ್ರೀಚೂರ್ಣಪರಿಪಾಲನೆ, ಕರಣಮಂತ್ರ ಪಠಣ,ಅನಾಥ ಶವವಾದರೆ ನಾರಾಯಣ ಬಲಿ ನಡೆಯಬೇಕು. ಅಸ್ಥಿ ಸಂಚಯ ಮತ್ತು ಅದನ್ನು ಪವಿತ್ರನದಿಗಳಲ್ಲಿ ವಿಸರ್ಜನೆ ಮಾಡುವುದು ಕೂಡ ಮುಖ್ಯ ಪದ್ಧತಿ’’ ಎನ್ನುತ್ತಾರೆ ಮೇಲುಕೋಟೆ ದೇಗುಲದ 4ನೇ ಸ್ಥಾನೀಕಂ ಶ್ರೀನಿವಾಸ ನರಸಿಂಹನ್.
ಆದರೆ, ಈ ಯಾವ ವಿಧಾನಕ್ಕೂ ಜಯಾ ಅಂತ್ಯಕ್ರಿಯೆಯಲ್ಲಿ ಆಸ್ಪದ ಸಿಗಲಿಲ್ಲ. ಹೀಗೆ, ಮಣ್ಣಿನಲ್ಲಿ ಮಣ್ಣಾಗುವುದು ಜಯಾ ಮರಣ ಪೂರ್ವ ಬಯಕೆಯಾಗಿತ್ತಾ,ಅಂತಿಮವಿ ನಿರ್ಧಾರ ಕೈಗೊಂಡರ ತೀರ್ಮಾನವೇ ಎನ್ನುವುದೂ ಸ್ಪಷ್ಟವಿಲ್ಲ. ದ್ರಾವಿಡ ಚಳವಳಿಯ ಹರಿಕಾರರೂ ಆದ ಜಯಾ ರಾಜಕೀಯ ಗುರು ಎಂಜಿಆರ್ ಸಮಾ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದು ದ್ರಾವಿಡ ಪದ್ಧತಿ ಪಾಲನೆಗೆ ಕಾರಣ ಎನ್ನಲಾಗುತ್ತಿದೆ.
ಕಣ್ಣೀರಾದ ತಮಿಳುನಾಡು : ಶೋಕಸಾಗರದಲ್ಲಿ ಮುಳುಗಿದ ಜನ
ಅಮ್ಮಾ ನಿಧನದ ಬಳಿಕ ಮಂಗಳವಾರ ಮುಂಜಾನೆ ಇಡೀ ಚೆನ್ನೈ ನಗರ ಅಕ್ಷರಶಃ ಸ್ತಬ್ಧವಾದಂತೆ ಕಂಡು ಬಂತು. ನಗರದ ಎಲ್ಲ ರಸ್ತೆಗಳ ಅಂಗಡಿ, ಹೋಟೆಲ್‌ಗಳು, ಸಂಸ್ಥೆಗಳು ಮುಚ್ಚಲ್ಪಟ್ಟರೆ, ಎಲ್ಲ ಬೀದಿಗಳಲ್ಲಿ ದುಃಖತಪ್ತ ಮುಖಗಳು ಕಂಡುಬಂದವು. ಸಾರ್ವಜನಿಕ ಸಾರಿಗೆ ಸೇವೆ, ಆಟೊ ರಿಕ್ಷಾಗಳು ಬೀದಿಗಿಳಿಯಲಿಲ್ಲ. ಕೆಲವು ಖಾಸಗಿ ವಾಹನಗಳು ಮಾತ್ರ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿದವು. ನಗರದ ಪ್ರಮುಖ ಭಾಗಗಳಲ್ಲಿ ಪೊಲೀಸರು ಬಿಗಿ ಕಟ್ಟೆಚ್ಚರ ವಹಿಸಿದ್ದರು.
ಸೋಮವಾರ ಸಂಜೆಯಿಂದಲೇ ಸಂಪೂರ್ಣ ನಗರ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ಮಂಗಳವಾರ ಮುಂಜಾನೆ ರಾಜಾಜಿ ಹಾಲ್‌ನಲ್ಲಿ ಅಮ್ಮಾ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಮಂದಿ ಸಾಗರೋಪಾದಿಯಲ್ಲಿ ಸಾಗಿ ಬಂದರು. ಪ್ರತಿಯೊಬ್ಬರ ಕಣ್ಣಲ್ಲಿ ಅಮ್ಮಾ ಅಂತಿಮ ದರ್ಶನದ ತವಕವಿತ್ತು, ಕಣ್ಣೀರಿತ್ತು. ಟೀಸ್ಟಾಲ್‌ಗಳೂ ಮುಚ್ಚಿದ್ದವು, ಕೆಲವೇ ಸಂಚಾರಿ ಟೀ ಮಾರಾಟಗಾರರು ಚಹಾ ಪೂರೈಸುತ್ತಿದ್ದರು. ಉಪ ನಗರ ರೈಲ್ವೆ ಸೇವೆ ಚಾಲನೆಯಲ್ಲಿದ್ದರೂ, ಪ್ರಯಾಣಿಕರ ಕೊರತೆ ಎದ್ದು ಕಾಣುತಿತ್ತು. ರಾಜ್ಯ ಸರ್ಕಾರ ರಜೆ ಘೋಷಿಸಿದ್ದುದರಿಂದ ಇಲಾಖೆಗಳು, ಶಿಕ್ಷಣ ಸಂಸ್ಥೆಗಳೂ ಮುಚ್ಚಲ್ಪಟ್ಟಿದ್ದವು. ತಮಿಳು ಸಿನೆಮಾ ಉದ್ಯಮ ದಿನದ ಮಟ್ಟಿಗೆ ಶೂಟಿಂಗ್ ಬಂದ್ ನಡೆಸಿ, ಅಗಲಿದ ನಾಯಕಿಗೆ ಗೌರವ ಸೂಚಿಸಿತು. ಚಿತ್ರ ಮಂದಿರಗಳೂ ಚಿತ್ರ ಪ್ರದರ್ಶನ ರದ್ದು ಪಡಿಸಿದ್ದವು. ಕೊಯಮತ್ತೂರ್, ತ್ರಿಪುರ್, ನೀಲಗಿರೀಸ್, ಮಧುರೈ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸಂಪೂರ್ಣ ಬಂದ್ ನಡೆದಿತ್ತು. ರಾಜ್ಯಾದ್ಯಂತ ‘ಅಮ್ಮಾ’ ಭಾವಚಿತ್ರಗಳನ್ನಿಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು. ರಸ್ತೆ ಬದಿಗಳಲ್ಲಿ ಪೆಂಡಾಲ್‌ಗಳನ್ನು ಹಾಕಿ, ಭಾವಚಿತ್ರಗಳನ್ನು ಇಡಲಾಗಿತ್ತು. ಅಲ್ಲದೆ ಬಹುತೇಕ ಕಡೆ ಶ್ರದ್ಧಾಂಜಲಿ ಪೋಸ್ಟರ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿತ್ತು.
ಬಾಬರಿ ಮಸೀದಿ ಧ್ವಂಸ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಮೆರವಣಿಗೆಗಳನ್ನು ಬಹುತೇಕ ಎಲ್ಲ ಸಂಘಟನೆಗಳು ರದ್ದುಪಡಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಅಮ್ಮಾ ನಿಧನಕ್ಕೆ ಶ್ರದ್ಧಾಂಜಲಿ ಸಂದೇಶಗಳು ವ್ಯಾಪಕವಾಗಿ ಹರಿದಾಡಿದವು. ಜಯಾ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಿಟ್ಟಿದ್ದ ರಾಜಾಜಿ ಹಾಲ್‌ಗೆ ಜನಸಮೂಹ ಹರಿದುಬಂದ ಕಾರಣ, ಕಾಲ್ತುಳಿತದಂತಹ ಪರಿಸ್ಥಿತಿಯೂ ತಲೆದೋರಿತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆದರೆ, ಎಐಎಡಿಎಂಕೆಯ ಅದೃಷ್ಟವೆಂಬಂತೆ, ಲಕ್ಷಾಂತರ ಮಂದಿ ಸೇರಿದ್ದರೂ ಇಡೀ ರಾಜ್ಯದಲ್ಲಿ ಎಲ್ಲೂ ಹಿಂಸಾಚಾರ, ಅಹಿತಕರ ಘಟನೆಗಳು ನಡೆಯಲಿಲ್ಲ. ಜಯಾ ಅವರನ್ನು ಮಣ್ಣು ಮಾಡುವವರೆಗೂ ಜನರು ಶಾಂತಿ ಕಾಯ್ದುಕೊಂಡರು.
ಆಹಾರ ಪೂರೈಕೆ: ಇಡೀ ತಮಿಳುನಾಡು ಅಘೋಷಿತ ಬಂದ್ ಆಗಿದ್ದ ಕಾರಣ, ಹೋಟೆಲ್‌ಗಳು, ಉಪಾಹಾರ ಮಂದಿರಗಳು ಮುಚ್ಚಿದ್ದ ಕಾರಣ, ಪ್ರವಾಸಿಗರು ಸೇರಿದಂತೆ ಅನೇಕರು ಅತಂತ್ರರಾಗಿದ್ದರು. ಅಂಥವರಿಗೆ ಕೆಲವು ಎನ್‌ಜಿಒಗಳು ಮತ್ತು ರಾಜಕೀಯ ಪಕ್ಷಗಳು ಆಹಾರ ಪೂರೈಸಿದವು ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಿದವು. ಜಮಾತ್ ಇ ಹಿಂದ್ ಸಂಸ್ಥೆಯು ರೈಲು, ಬಸ್ ನಿಲ್ದಾಣಗಳು ಹಾಗೂ ಇತರೆ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಜನರಿಗೆ ಉಚಿತ ಬಸ್ ಸೇವೆ ಕಲ್ಪಿಸಿತು. ುಡ್ ಬ್ಯಾಂಕ್ ಎನ್ನುವ ಎನ್‌ಜಿಒವೊಂದು ನಗರದಾದ್ಯಂತ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಸಿಬ್ಬಂದಿಗೆ ಆಹಾರದ ವ್ಯವಸ್ಥೆ ಮಾಡಿತು.
