ಕಳೆದ ಸೆಪ್ಟೆಂಬರ್ 22 ರಂದು ತೀವ್ರ ಉಸಿರಾಟದ ತೊಂದರೆ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಚೆನ್ನೈ ಅಪೋಲೊ ಆಸ್ಪತ್ರೆಗೆ ಅಮ್ಮಾ ದಾಖಲಾಗಿದ್ದರು.

ಚೆನ್ನೈ(ನ.12): ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯ ಸಂಪೂರ್ಣ ಸುಧಾರಣೆಗೊಂಡಿದೆ, ಅವರು ಇಷ್ಟ ಪಟ್ಟರೆ ಮನೆಗೆ ಹೋಗಬಹುದು ಎಂದು ಅಪೋಲೊ ಆಸ್ಪತ್ರೆ ನಿರ್ದೇಶಕ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಕಳೆದ ಸೆಪ್ಟೆಂಬರ್ 22 ರಂದು ತೀವ್ರ ಉಸಿರಾಟದ ತೊಂದರೆ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಚೆನ್ನೈ ಅಪೋಲೊ ಆಸ್ಪತ್ರೆಗೆ ಅಮ್ಮಾ ದಾಖಲಾಗಿದ್ದರು. ನಂತರ ಅವರ ಶ್ವಾಸಕೋಶದ ಸೋಂಕು ಸಮಸ್ಯೆ ಕಾಣಿಸಿಕೊಂಡ ಕಾರಣಕ್ಕೆ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಸತತ 50 ದಿನಗಳ ಚಿಕಿತ್ಸೆ ನಂತರ ಜಯಲಲಿತಾರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಾಣಿಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ನಿರ್ದೇಶಕ ಪ್ರತಾಪ್ ರೆಡ್ಡಿ ಜಯಲಲಿತಾ ಅವರು ಸಂಪೂರ್ಣ ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗುವ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಜಯಲಲಿತಾ ಅವರಿಗೆ ತುರ್ತು ನಿಗಾ ಘಟಕದಿಂದ ಖಾಸಗಿ ಕೋಣೆಗೆ ಸ್ಥಳಾಂತರಿಸಲಾಗಿದೆ. ಅಷ್ಟೇ ಅಲ್ಲದೇ ಅವರ ಶ್ವಾಸಕೋಶದ ಸೋಂಕು ಸಮಸ್ಯೆ ಕೂಡ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಜಯಲಲಿತಾ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಂದು ತಿಳಿಸಿದರು.