ಉಡುಪಿ/ಚಿಕ್ಕಮಗಳೂರು (ಫೆ. 22):  ಬಿಜೆಪಿಯಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತೊಮ್ಮೆ ಸ್ಪರ್ಧಿಸುತ್ತಾರಾ ಅಥವಾ ಇಲ್ಲವಾ ಎಂಬ ಗೊಂದಲದ ನಡುವೆಯೇ ಮಿತ್ರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಯಾರಿಗೆ ಈ ಕ್ಷೇತ್ರ ದಕ್ಕಲಿದೆ ಎಂಬುದು ಕುತೂಹಲಕರವಾಗಿದೆ.

ಕೇವಲ 10 ವರ್ಷಗಳಷ್ಟುಹಳೆಯ ಈ ಕ್ಷೇತ್ರದಲ್ಲಿ ಈವರೆಗೆ ಎರಡು ಸಾರ್ವತ್ರಿಕ ಲೋಕಸಭಾ ಚುನಾವಣೆಗಳು ಮತ್ತು ಒಂದು ಉಪಚುನಾವಣೆ ನಡೆದಿದೆ. 2009ರಲ್ಲಿ ಡಿ.ವಿ.ಸದಾನಂದ ಗೌಡ (ಬಿಜೆಪಿ), 2012ರ ಉಪ ಚುನಾವಣೆಯಲ್ಲಿ ಜಯಪ್ರಕಾಶ್‌ ಹೆಗ್ಡೆ (ಕಾಂಗ್ರೆಸ್‌) ಮತ್ತು 2014ರಲ್ಲಿ ಶೋಭಾ ಕರಂದ್ಲಾಜೆ (ಬಿಜೆಪಿ) ಆಯ್ಕೆಯಾಗಿದ್ದಾರೆ. ವಿಶೇಷ ಎಂದರೇ ಈ ಮೂವರು ಉಡುಪಿ ಜಿಲ್ಲೆಯವರು.

ಟಿಕೆಟ್ ಫೈಟ್: ಕಾಂಗ್ರೆಸ್ ಭದ್ರಕೋಟೆ ಚಾಮರಾಜನಗರದಲ್ಲಿ ಅರಳುತ್ತಾ ಕಮಲ?

2009ರಲ್ಲಿ ಸಿಪಿಎಂನಿಂದ ರಾಧಾ ಸುಂದರೇಶ್‌ ಮತ್ತು 2012ರಲ್ಲಿ ಜೆಡಿಎಸ್‌ನಿಂದ ಎಸ್‌. ಎಲ್ ಭೋಜೇಗೌಡರನ್ನು ಬಿಟ್ಟರೆ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಅಥವಾ ಕಾಂಗ್ರೆಸ್ಸಿನ ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಈ ಬಾರಿಯಾದರೂ ಚಿಕ್ಕಮಗಳೂರು ಜಿಲ್ಲೆಯ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂಬ ಕೂಗೆದ್ದಿದೆ. ಈ ಕೂಗಿಗೆ ಕಾಂಗ್ರೆಸಿನಲ್ಲಿ ಸಂಚಲನ ಮೂಡಿದೆ. ಬಿಜೆಪಿ ಮಾತ್ರ ಉಡುಪಿಯಲ್ಲೇ ಅಭ್ಯರ್ಥಿಯನ್ನು ಹುಡುಕುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆ ಬಿಜೆಪಿಗೆ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ನ್ನು ಗೆಲ್ಲಿಸಿಕೊಟ್ಟಿದೆ. ಈ ಲೆಕ್ಕಾಚಾರ ನೋಡಿದರೆ, ಉಡುಪಿ ಚಿಕ್ಕಮಗಳೂರು ಬಿಜೆಪಿಗೆ ಸುಲಭದ ತುತ್ತು ಎನ್ನುವಂತೆ ಕಾಣುತ್ತಿದೆ. ಆದರೆ ವಾಸ್ತವ ಭಿನ್ನವಾಗಿದೆ.

ಟಿಕೆಟ್ ಫೈಟ್: ಡಿಕೆ+ಎಚ್‌ಡಿಕೆ ವರ್ಸಸ್‌ ಯೋಗಿ?

ಇಲ್ಲಿನ ಹಾಲಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಿದಲ್ಲೇ ವ್ಯಸ್ತರಾಗಿ, ಕ್ಷೇತ್ರಕ್ಕೆ ನಂತರದ ಪ್ರಾಶಸ್ತ್ಯ ಕೊಟ್ಟಿರುವುದು, ಜನರಲ್ಲಿ ಮಾತ್ರವಲ್ಲ ಪಕ್ಷದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ.

ಶೋಭಾ ಸ್ಪರ್ಧೆ ಅನುಮಾನದ ವದಂತಿ:

ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿರುವ ಇಲ್ಲಿ ಗೆಲ್ಲುವುದು ಬಿಜೆಪಿಗೆ ಶತಾಯಗತಾಯ ಮರ್ಯಾದೆಯ ​ಪ್ರಶ್ನೆಯಾಗಿದೆ. ಆದರೆ ಉಡುಪಿ​- ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮ ಜನಪ್ರಿಯತೆ ಕಡಿಮೆಯಾಗಿರುವುದರಿಂದಲೋ ಅಥವಾ ಪಕ್ಷದ ಶಕ್ತಿಕೇಂದ್ರ ಬೆಂಗಳೂರಿಗೆ ಹತ್ತಿರವಾಗಬೇಕು ಎಂಬ ಉದ್ದೇಶದಿಂದಲೋ ಅವರು ಬೆಂಗಳೂರು ಸುತ್ತಮುತ್ತ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಹಲವು ದಿನಗಳಿಂದ ಕೇಳಿಬರುತ್ತಿತ್ತು. ಇದೀಗ ಮತ್ತೆ ಶೋಭಾ ಅವರೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದ್ದು, ವದಂತಿಗೆ ತೆರೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಒಂದು ವೇಳೆ ಶೋಭಾ ನಿರಾಕರಿಸಿದಲ್ಲಿ ಬಿಜೆಪಿಯಿಂದ ಯಾರು ಅಭ್ಯರ್ಥಿ ಎಂಬುದು ಪಕ್ಷದೊಳಗೂ, ಹೊರಗೂ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಹತ್ತಾರು ಹೆಸರು ಗಾಳಿಯಲ್ಲಿವೆಯಾದರೂ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಮತ್ತು ಮೊಗವೀರ ಸಮುದಾಯದ ಯುವಕ ಯಶಪಾಲ್ ಸುವರ್ಣ ಹೆಸರುಗಳು ಮುಂದಿವೆ.

ಜಯಪ್ರಕಾಶ್‌ ಹೆಗ್ಡೆ ಸಂಸದರಾಗಿದ್ದವರು, ಉತ್ತಮ ಮುತ್ಸದ್ದಿ, ಪಕ್ಷೇತರಾಗಿ ಮೂರು ಬಾರಿ ಶಾಸಕರಾಗುವಷ್ಟುಜನಬೆಂಬಲ ಇರುವವರು. ಜೊತೆಗೆ ಬಂಟ ಸಮುದಾಯಕ್ಕೆ ಸೇರಿದವರು ಎನ್ನುವುದು ಪ್ಲಸ್‌ ಆಗಿರುವ ಅಂಶ. ಸಮಾಜವಾದದ ಹಿನ್ನೆಲೆಯಿಂದ ಬಂದ ಅವರಿಗೆ ಬಿಜೆಪಿಯ ತತ್ವಗಳಿಗೆ ಒಗ್ಗಿಕೊಳ್ಳುವುದಕ್ಕೆ ಕಷ್ಟವಾಗಿರುವುದು ಮೈನಸ್‌ ಆಗಿದೆ.

ರಾಷ್ಟ್ರೀಯ ಮೀನುಗಾರರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಈ ಭಾಗದಲ್ಲಿ ಪ್ರಬಲವಾಗಿರುವ ಮೊಗವೀರ ಸಮುದಾಯದ ಯುವಕ, ಸಂಘ ಪರಿವಾರದ ಹಿನ್ನೆಲೆಯೂ ಇದೆ. ಕಳೆದ ಚುನಾವಣೆ ಪ್ರಚಾರದಲ್ಲಿ ಶೋಭಾ ಜೊತೆ ಚಿಕ್ಕಮಗಳೂರಿನಲ್ಲಿ ಓಡಾಡಿದವರು.

ಇತ್ತೀಚೆಗೆ 50 ಸಾವಿರ ಮೀನುಗಾರರ ಪ್ರತಿಭಟನೆಯ ನೇತೃತ್ವ ವಹಿಸಿ ತಾನು ಲೋಕಸಭಾ ಟಿಕೆಟ್‌ ಆಕಾಂಕ್ಷಿ ಎನ್ನುವುದನ್ನು ತೋರಿಸಿದ್ದರು. ಒಂದು ವೇಳೆ ಶೋಭಾ ತನ್ನ ಬದಲಿಗೆ ಉಡುಪಿ-ಚಿಕ್ಕಮಗಳೂರಿಗೆ ಅಭ್ಯರ್ಥಿಯನ್ನು ಆರಿಸುವ ಅಧಿಕಾರ ಹೊಂದಿದ್ದರೆ, ಯಶಪಾಲ್ ಟಿಕೆಟ್‌ ಪಡೆಯಬಹುದು.

ಕಾಂಗ್ರೆಸಲ್ಲಿ ಯಾರ್ಯಾರು?

ಉಡುಪಿ ಕಾಂಗ್ರೆಸಿನಲ್ಲಿ ಅಭ್ಯರ್ಥಿಗಳಲ್ಲ, ಅಕಾಂಕ್ಷಿಗಳು ಯಾರು ಎಂಬುದೇ ಗೊಂದಲವಿದೆ. ಮಾಜಿ ಸಂಸದ ವಿನಯಕುಮಾರ್‌ ಸೊರಕೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಜಿಲ್ಲೆಯಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯದವರಾದ ಅವರು ಕಳೆದ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದರೂ, ಮೋದಿ ಅಲೆಯಲ್ಲಿ ಸೋತವರು. ಆದರೆ ಅವರ ಕಣ್ಣು ತವರೂರಾದ ದಕ್ಷಿಣ ಕನ್ನಡ ಕ್ಷೇತ್ರದ ಕಡೆಗೆ ನೆಟ್ಟಿದೆ ಎನ್ನಲಾಗುತ್ತಿದೆ.

ಚಿಕ್ಕಮಗಳೂರಿನಿಂದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಡಿ.ಎಲ್ ವಿಜಯಕುಮಾರ್‌, ಇವರು ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್,  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಲ್ ಶಂಕರ್‌ ಮುಂತಾದವರ ಆಶೀರ್ವಾದದಿಂದ ಆರು ವರ್ಷಗಳಿಂದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿರುವವರು. ಅದೇ ಆಶೀರ್ವಾದದಿಂದ ಟಿಕೆಟು ಪಡೆಯುವ ಧೈರ್ಯದಲ್ಲಿದ್ದಾರೆ.

ಆದರೆ ಕಾಂಗ್ರೆಸ್ಸಿನಿಂದ ಪ್ರಬಲ ಆಕಾಂಕ್ಷಿಯಾಗಿರುವವರು ಡಾ.ಆರತಿ ಕೃಷ್ಣ ಅವರು. ರಾಜ್ಯದ ಎನ್‌.ಆರ್‌.ಐ ಫೋರಂನ ಉಪಾಧ್ಯಕ್ಷೆಯಾಗಿರುವ ಅವರು, ದೆಹಲಿ ಕಾಂಗ್ರೆಸ್‌ ನಾಯಕರಿಗೆ ಪರಿಚಿತರು. ಅಮೆರಿಕದಲ್ಲಿ ಶಿಕ್ಷಣ ಪಡೆದವರು, ಅಮೆರಿಕದ ಭಾರತೀಯ ರಾಯಬಾರಿ ಕಚೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿದ್ದವರು. ಜೊತೆಗೆ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಬೆಗಾನೆ ರಾಮಯ್ಯಅವರ ಮಗಳು. ಇವರಿಗೆ ಟಿಕೆಟ್‌ ಸಿಕ್ಕಿದರೂ ಅಚ್ಚರಿ ಇಲ್ಲ.

ಮೈತ್ರಿ ಗತಿ ಏನು?:

ರಾಜ್ಯದ ಸಮ್ಮಿಶ್ರ ಸರ್ಕಾರದ ಮೈತ್ರಿ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯುವುದರಿಂದ, ಉಡುಪಿ-ಚಿಕ್ಕಮಗಳೂರಿಗೆ ಮೈತ್ರಿ ಅಭ್ಯರ್ಥಿ ಟಿಕೆಟ್‌ ಬಹುತೇಕ ಕಾಂಗ್ರೆಸ್‌ಗೆ ಒಲಿಯುವ ಸಾಧ್ಯತೆಗಳೇ ಹೆಚ್ಚಿದೆ. ಕಾರಣ ಈ ಕ್ಷೇತ್ರದ ಅಕ್ಕಪಕ್ಕದ ಉತ್ತರ ಕನ್ನಡ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳೆರಡರನ್ನೂ ಜೆಡಿಎಸ್‌ಗೆ ಬಿಟ್ಟು ಕೊಡಬೇಕು ಎಂದು ದೇವೇಗೌಡರು ಹೇಳಿದ್ದಾರೆ.

ಉಡುಪಿ-ಚಿಕ್ಕಮಗಳೂರಿನಲ್ಲಿ ಜೆಡಿಎಸ್‌ಗೆ ಹಿಡಿತವೂ ಇಲ್ಲದಿರುವುದರಿಂದ ಕಾಂಗ್ರೆಸ್‌ ಅವಕಾಶ ಪಡೆಯುತ್ತದೆ ಎನ್ನುವುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ.

ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಅವರೇ ಮತ್ತೆ ಅಭ್ಯರ್ಥಿಯಾದಲ್ಲಿ ಅಲ್ಲಿರುವ ಜಯಪ್ರಕಾಶ್‌ ಹೆಗ್ಡೆ ಅವರನ್ನು ಸೆಳೆದು ಮಿತ್ರ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಜೆಡಿಎಸ್‌ ವರಿಷ್ಠ ದೇವೇಗೌಡರ ಲೆಕ್ಕಾಚಾರ. ಈ ಸಂಬಂಧ ಒಂದು ಹಂತದ ಮಾತುಕತೆ ನಡೆದಿದ್ದರೂ ಜಯಪ್ರಕಾಶ್‌ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಟಿಕೆಟ್‌ ಹಂಚಿಕೆ ಕುರಿತಂತೆ ನಡೆಯುವ ಮಾತುಕತೆ ವೇಳೆ ಗೌಡರು ಈ ಕ್ಷೇತ್ರವನ್ನು ತಮಗೇ ಬಿಟ್ಟುಕೊಡುವಂತೆ ಪ್ರತಿಪಾದಿಸುವ ಸಾಧ್ಯತೆಯಿದೆ.

ಬಿಜೆಪಿ: ಶೋಭಾ ಕರಂದ್ಲಾಜೆ(ಹಾಲಿ ಸಂಸದೆ), ಜಯಪ್ರಕಾಶ್‌ ಹೆಗ್ಡೆ, ಯಶಪಾಲ್ ಸುವರ್ಣ

ಕಾಂಗ್ರೆಸ್‌: ವಿನಯಕುಮಾರ್‌ ಸೊರಕೆ, ಡಾ.ಡಿ.ಎಲ್ ವಿಜಯಕುಮಾರ್‌, ಡಾ.ಆರತಿ ಕೃಷ್ಣ

8 ಕ್ಷೇತ್ರದಲ್ಲಿ 7 ಬಿಜೆಪಿ, 1 ಕಾಂಗ್ರೆಸ್‌

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನ ಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕುಂದಾಪುರ ಮತ್ತು ಕಾರ್ಕಳ ಕ್ಷೇತ್ರಗಳಲ್ಲಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ, ಚಿಕ್ಕಮಗಳೂರು, ಮೂಡಿಗೆರೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ, ಶೃಂಗೇರಿಯಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿದೆ.

ಕ್ಷೇತ್ರ ಸ್ವಾರಸ್ಯ

2009ಕ್ಕೆ ಮೊದಲು ಉಡುಪಿ ಮತ್ತು ಚಿಕ್ಕಮಗಳೂರು ಪ್ರತ್ಯೇಕ ಲೋಕಸಭಾ ಕ್ಷೇತ್ರಗಳಾಗಿದ್ದವು. ಚಿಕ್ಕಮಗಳೂರು ದಿವಂಗತ ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ಕೊಟ್ಟಕ್ಷೇತ್ರ. ಇಲ್ಲಿಂದ ಘಟಾನುಘಟಿಗಳಾದ ಡಿ.ಬಿ.ಚಂದ್ರೇಗೌಡ, ಬಿ.ಎಲ್ ಶಂಕರ್‌, ಡಿ.ಕೆ.ತಾರಾದೇವಿ, ಡಿ.ಸಿ.ಶ್ರೀಕಂಠಪ್ಪ ಲೋಕಸಭೆ ಪ್ರವೇಶಿಸಿದ್ದರು. ಉಡುಪಿಯಿಂದ ಆಸ್ಕರ್‌ ಫೆರ್ನಾಂಡಿಸ್‌ ಅವರು ಅತೀ ಹೆಚ್ಚು 5 ಬಾರಿಮ ಗೆದ್ದಿದ್ದರು. ರಂಗನಾಥ್‌ ಶೆಣೈ, ಟಿ.ಎ.ಪೈ, ಮನೋರಮಾ ಮಧ್ವರಾಜ, ಡಿ.ವಿ.ಸದಾನಂದ ಗೌಡ ಮುಂತಾದವರು ಗೆದ್ದ ಕ್ಷೇತ್ರವಿದು.

- ಸುಭಾಶ್ಚಂದ್ರ ವಾಗ್ಳೆ /ತಾರಾನಾಥ್‌