ರಾಜ್ಯಸಭೆಗೆ ಮರು ಆಯ್ಕೆ ಬಯಸಿ, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಜಯಾ ಬಚ್ಚನ್‌, ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಇದುವರೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅತ್ಯಂತ ಸಿರಿವಂತೆ ಇವರೇ.

ಹೊಸದಿಲ್ಲಿ: ರಾಜ್ಯಸಭೆಗೆ ಮರು ಆಯ್ಕೆ ಬಯಸಿ, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಜಯಾ ಬಚ್ಚನ್‌, ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಇದುವರೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅತ್ಯಂತ ಸಿರಿವಂತೆ ಇವರೇ.

ತಾವು 1000 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಹೊಂದಿರುವುದಾಗಿ ಸ್ವತಃ ಜಯಾ ಬಚ್ಚನ್​ ಘೋಷಿಸಿಕೊಂಡಿದ್ದಾರೆ. 2012ರಲ್ಲಿ ಅವರು ಘೋಷಿಸಿದ್ದ ಆಸ್ತಿ ಮೌಲ್ಯ 492 ಕೋಟಿ ರೂ.ಗಳಾಗಿತ್ತು. 2014ರಲ್ಲಿ ರಾಜ್ಯಸಭೆಗೆ ಪ್ರವೇಶಿದ ಬಿಜೆಪಿ ಸಂಸದ ರವೀಂದ್ರ ಕಿಶೋರ್ ಅತ್ಯಂತ ಶ್ರೀಮಂತರೆಂಬ ಖ್ಯಾತಿಗೆ ಪಾತ್ರರಾಗಿದ್ದು, ಇದೀಗ ಅವರನ್ನೂ ಮೀರಿ ಜಯಾ ಸಿರಿವಂತೆಯಾಗಿದ್ದಾರೆ.

2012ರಲ್ಲಿ ಜಯಾ ಮತ್ತು ಅವರ ಪತಿ ಅಮಿತಾಭ್‌ ಬಚ್ಚನ್‌ 152 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದರು. ಇದೀಗ ಅವುಗಳ ಮೌಲ್ಯ 460 ಕೋಟಿ ರೂ.ಗಳಾಗಿದೆ. ಅದೇ ರೀತಿ 2012ರಲ್ಲಿ 343 ಕೋಟಿ ರೂ ಮೌಲ್ಯದ ಚರಾಸ್ತಿ , ಈಗ 540 ಕೋಟಿ ರೂ.ಗೆ ಏರಿದೆ. ಜಯಾ ದಂಪತಿ 62 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಆ ಪೈಕಿ ಅಮಿತಾಭ್ ಅವರೊಬ್ಬರೇ 36 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. 

ಬಚ್ಚನ್‌ ದಂಪತಿ 12 ಸ್ವಂತ ವಾಹನಗಳನ್ನು ಹೊಂದಿದ್ದು, ಅವುಗಳ ಮೌಲ್ಯ 13 ಕೋಟಿ ರೂ.ಗಳಾಗಿವೆ. ಒಂದು ರೋಲ್ಸ್‌ರಾಯ್ಸ್‌, ಮೂರು ಮರ್ಸಿಡಿಸ್‌, ಒಂದು ಪಾರ್ಶ್ ಮತ್ತು ಒಂದು ರೇಂಜ್‌ ರೋವರ್‌ ಕಾರುಗಳೂ ಇವೆ. ಅಮಿತಾಬ್‌ ಅವರ ಬಳಿ ಒಂದು ನ್ಯಾನೋ ಕಾರು ಹಾಗೂ ಒಂದು ಟ್ರ್ಯಾಕ್ಟರ್‌ ಕೂಡ ಇದೆ.

ಅಮಿತಾಭ್ ಮತ್ತು ಜಯಾ ಕ್ರಮವಾಗಿ 3.4 ಕೋಟಿ ರೂ ಹಾಗೂ 51 ಲಕ್ಷ ರೂ ಮೌಲ್ಯದ ವಾಚುಗಳನ್ನು ಹೊಂದಿದ್ದಾರೆ. ಅಲ್ಲದೆ ಅಮಿತಾಭ್‌ ಅವರ ಬಳಿ 9 ಲಕ್ಷ ರೂ ಬೆಲೆಯ ಒಂದು ಪೆನ್ ಕೂಡ ಇದೆ. ಬಚ್ಚನ್‌ ದಂಪತಿ ಫ್ರಾನ್ಸ್‌ನಲ್ಲಿ 3,175 ಚದರ ಮೀಟರ್‌ ವಿಸ್ತೀರ್ಣದ ನಿವಾಸ ಹೊಂದಿದ್ದಾರೆ. ಅಲ್ಲದೆ ನೋಯಿಡಾ, ಭೋಪಾಲ್‌, ಪುಣೆ, ಅಹಮದಾಬಾದ್‌ ಮತ್ತು ಗಾಂಧಿನಗರಗಳಲ್ಲಿಯೂ ಆಸ್ತಿಗಳಿವೆ. 
ಜಯಾ ಅವರ ಬಳಿ ಲಖನೌದಲ್ಲಿ 2 ಕೋಟಿ ರೂ ಮೌಲ್ಯ 1.22 ಹೆಕ್ಟೇರ್‌ ಕೃಷಿ ಭೂಮಿ, ಅಮಿತಾಭ್‌ ಬಳಿ ಬಾರಾಬಂಕಿ ಜಿಲ್ಲೆಯ ದೌಲತಾಪುರ್‌ನಲ್ಲಿ 5.7 ಕೋಟಿ ಮೌಲ್ಯದ 3 ಎಕರೆ ಭೂಮಿಯಿದೆ.