ದೇಶದ ಪ್ರಥಮ ಪ್ರಧಾನಿ ವಿರುದ್ಧ ಅಹುಜಾ ಕಿಡಿ! ಹಂದಿ ಮಾಂಸ ತಿನ್ನುತ್ತಿದ್ದ ನೆಹರೂ ಪಂಡಿತ್ ಅಲ್ಲ! ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಹೇಳಿಕೆ! ಗೋಮಾಂಸ ಸೇವನೆ ಮಾಡುವವರು ಪಂಡಿತ್ ಅಲ್ಲ
ಜೈಪುರ್(ಆ.11): ಗೋಮಾಂಸ ಮತ್ತು ಹಂದಿ ಮಾಂಸ ತಿನ್ನುತ್ತಿದ್ದ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಪಂಡಿತ್ ಆಗಲು ಸಾಧ್ಯವೇ ಇಲ್ಲ ಎಂದು ರಾಜಸ್ಥಾನ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಹೇಳಿದ್ದಾರೆ.
ನೆಹರೂ ಅವರನ್ನು ಯಾರಾದರೂ ಪಂಡಿತ್ ಎಂದು ನಂಬಿದ್ದರೆ ಅದು ಅವರ ಮೂರ್ಖತನ ಎಂದಿರುವ ಅಹುಜಾ, ಗೋಮಾಂಸ ಮತ್ತು ಹಂದಿ ಮಾಂಸ ತಿನ್ನುವವರು ಪಂಡಿತ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಕೇವಲ ಮತಕ್ಕಾಗಿ ಕಾಂಗ್ರೆಸ್ ನೆಹರೂ ಅವರ ಹೆಸರಿನ ಮುಂದೆ ಪಂಡಿತ್ ಎಂದು ಸೇರಿಸಿದೆ ಎಂದಿರುವ ಅಹುಜಾ, ಮತಕ್ಕಾಗಿ ಕಾಂಗ್ರೆಸ್ ಈ ದೇಶದ ಅತ್ಯಂತ ಸನಾತನ ಮತ್ತು ಸಭ್ಯ ಜಾತಿಯ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಅಲ್ವರ್ ನ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದವೂ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇನ್ನು ಅಹುಜಾ ಹೇಳಿಕೆಯನ್ನು ಖಂಡಿಸಿರುವ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲೆಟ್, ತಮ್ಮ ಕ್ಷೇತ್ರದ ಸಮಸ್ಯೆಗಳತ್ತ ಗಮನಹಿರುಸವ ಬದಲು ಅಹುಜಾ ಬೇಡದ ಸಂಗತಿಗಳ ಕುರಿತು ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
