ಕಳೆದ ಜುಲೈ 8ರಂದು ನಡೆದ ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಆರಂಭವಾದ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿ 65 ಮಂದಿ ನಾಗರೀಕರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

ನವದೆಹಲಿ (ಅ.11): ಮೂರು ತಿಂಗಳುಗಳು ಕಳೆದರೂ ಕಾಶ್ಮೀರ ಕಣಿವೆಯು ಸಹಜ ಸ್ಥಿತಿಗೆ ಮರಳದಿರುವ ಹಿನ್ನೆಲೆಯಲ್ಲಿ, ಜಮ್ಮು-ಕಾಶ್ಮೀರಕ್ಕೆ ಹೊಸ ಸರ್ಕಾರದ ಅಗತ್ಯವಿದೆಯೆಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ಕಾಶ್ಮೀರದ ಬಗ್ಗೆ ಪಿಡಿಪಿ ಹಾಗೂ ಬಿಜೆಪಿ ತದ್ವಿರುದ್ಧ ನಿಲುವುಗಳನ್ನು ಹೊಂದಿವೆ. ಅವುಗಳಿಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಮೈತ್ರಿಯನ್ನು ಮುರಿದು ಹೊರಬರಬೇಕು ಹಾಗೂ ಹೊಸ ಸರ್ಕಾರದ ರಚನೆಗೆ ಆಸ್ಪದ ಮಾಡಿಕೊಡಬೇಕು ಎಂದು ಅಯ್ಯರ್ ಹೇಳಿದ್ದಾರೆ.

ಕಳೆದ ಜುಲೈ 8ರಂದು ನಡೆದ ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಆರಂಭವಾದ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿ 65 ಮಂದಿ ನಾಗರೀಕರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ. ಸೇನೆಯೊಂದಿಗೆ ನಡೆದ ಘರ್ಷಣೆಗಳಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ ಹಾಗೂ ಕಿರುಗುಂಡು ದಾಳಿಯಿಂದ ದೃಷ್ಟಿ ಕಳೆದುಕೊಂಡಿದ್ದಾರೆ.

ಕಳೆದ ಮೂರು ತಿಂಗಳುಗಳಿಂದ ಕಣಿವೆಯು ಪ್ರಕ್ಷುಬ್ಧವಾಗಿದ್ದು, ಕಣಿವೆಯ ಹಲವು ಭಾಗಗಳಲ್ಲಿ ಸತತವಾಗಿ ಕರ್ಫ್ಯೂ ಮುಂದುವರೆದಿದೆ.