ನವದೆಹಲಿ[ಆ.12]: ಜಮ್ಮು- ಕಾಶ್ಮೀರ ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ವಿಂಗಡನೆ ಬಳಿಕ ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್‌ ವ್ಯವಸ್ಥೆ ಉಪ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ನೇರ ಹಿಡಿತಕ್ಕೆ ಒಳಪಡಲಿದೆ. ಭೂಮಿಯ ಮೇಲಿನ ಹಕ್ಕು, ಆಯ್ಕೆಯಾದ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡಲಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು- ಕಾಶ್ಮೀರ ಮತ್ತು ಲಡಾಕ್‌ ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಂಗಡಿಸುವ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಶುಕ್ರವಾರ ಸಹಿ ಹಾಕಿದ್ದು, ಅ.31ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ದೆಹಲಿ ಉಪರಾಜ್ಯಪಾಲರಂತೆ ಅಲ್ಲದೇ ಭೂಮಿಯ ಮಾರಾಟ, ವರ್ಗಾವಣೆ, ಕೃಷಿ ಭೂಮಿಯ ಪರಿವರ್ತನೆ, ಭೂ ಸುಧಾರಣೆ, ಕೃಷಿ ಸಾಲ, ಭೂ ಕಂದಾಯ ಸೇರಿದಂತೆ ಭೂಮಿಗೆ ಸಂಬಂಧಿಸಿದ ಎಲ್ಲಾ ಹಕ್ಕುಗಳು ನೂತನವಾಗಿ ಆಯ್ಕೆ ಆಗುವ ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಗೆ ಒಳಪಡಲಿದೆ.

ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಉಪರಾಜ್ಯಪಾಲರೊಬ್ಬರನ್ನು ಹೊಂದಿರಲಿದ್ದು, ವಿಧಾನಸಭೆ ಗರಿಷ್ಠ 107 ಸದಸ್ಯರನ್ನು ಹೊಂದಿರಲಿದೆ. ಗಡಿ ನಿರ್ಧಾರದ ಬಳಿಕ ವಿಧಾನಸಭೆಯ ಬಲವನ್ನು 114ಕ್ಕೆ ಏರಿಸಲು ಅವಕಾಶವಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ವ್ಯಾಪ್ತಿಯಲ್ಲಿ ಬರುವ 24 ವಿಧಾನಸಭಾ ಕ್ಷೇತ್ರಗಳು ಖಾಲಿ ಉಳಿಯಲಿವೆ.

ಅಖಿಲ ಭಾರತ ಸೇವೆಗಳಾದ ಐಎಎಸ್‌, ಐಪಿಎಸ್‌, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಉಪ ರಾಜ್ಯಪಾಲರ ವ್ಯಾಪ್ತಿಗೆ ಒಳಪಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.