ಚೆನ್ನೈನ ಮರೀನಾ ಬೀಚ್'ನಲ್ಲಿ ಪ್ರತಿಭಟನಾ ನಿರತರನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸುತ್ತಿದ್ದಾರೆ.
ಚೆನ್ನೈ(ಜ.23): ಕೇಂದ್ರ ಸರ್ಕಾರ ಸುಗ್ರಿವಾಜ್ಞೆಯೊಂದಿಗೆ ಜಲ್ಲಿಕಟ್ಟು ನಿಷೇಧವನ್ನು ತೆರವುಗೊಳಿಸಿದ ನಂತರವೂ ಚೆನ್ನೈ ಸೇರಿದಂತೆ ಕೆಲವು ಕಡೆ ಪ್ರತಿಭಟನೆ ಮುಂದುವರಿದಿದೆ. ಸಾಂಪ್ರದಾಯಿಕ ಕ್ರೀಡೆಗೆ ಶಾಶ್ವತ ಪರಿಹಾರ ದೊರಕಿಸಬೇಕೆಂದು ಒತ್ತಾಯಿಸಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಚೆನ್ನೈನ ಮರೀನಾ ಬೀಚ್'ನಲ್ಲಿ ಪ್ರತಿಭಟನಾ ನಿರತರನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸುತ್ತಿದ್ದಾರೆ. ನಮಗೆ ತಾತ್ಕಾಲಿಕ ಪರಿಹಾರ ಬೇಡ ಶಾಶ್ವತ ಸುಗ್ರಿವಾಜ್ಞೆ ಅಥವಾ ಕಾನೂನನ್ನು ರಚಿಸಿ ಎಂಬುದು ಪ್ರತಿಭಟನಾ ನಿರತರ ಆಗ್ರಹವಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಸುಗ್ರಿವಾಜ್ಞೆ ಮಂಡಿಸುವ ಸಲುವಾಗಿ ಇಂದು ವಿಧಾನಸಭೆಯ ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದಾರೆ. ಜಲ್ಲಿಕಟ್ಟು ರಾಜ್ಯದಾದ್ಯಂತ ಆರಂಭವಾದರೂ ಮಧುರೈ ಒಳಗೊಂಡು ಕೆಲವುಕಡೆ ಸಾಂಪ್ರದಾಯಿಕ ಉತ್ಸವವನ್ನು ಬಹಿಷ್ಕರಿಸಲಾಗಿತ್ತು. ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿಯವರನ್ನು ಪ್ರತಿಭಟನಾಕಾರರು ತಡೆದಿದ್ದರು. ಈ ಮಧ್ಯೆ ಪುಡುಕೊಟ್ಟೈ ಜಿಲ್ಲೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದರು.
