"

ಹೈದರಾಬಾದ್: ಪ್ರಚಂಡ ಬಹುಮತದೊಂದಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಜಗನ್ಮೋಹನ ರೆಡ್ಡಿ ಅವರು ಸರ್ಕಾರಿ ಯೋಜನೆಗಳಿಂದ ತೆಲುಗುದೇಶಂ ಪಕ್ಷದ ಸಂಸ್ಥಾಪಕ ಎನ್‌ಟಿಆರ್ ಹೆಸರನ್ನು ಕೈಬಿಟ್ಟಿದ್ದಾರೆ. ಮೂರು ಯೋಜನೆಗಳಿಗೆ ತಮ್ಮ ತಂದೆ, ಅವಿಭಜಿತ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ (ವೈಎಸ್ಸಾರ್) ಹೆಸರನ್ನು ನಾಮಕರಣ ಮಾಡಿದ್ದಾರೆ. 

ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ‘ಎನ್ ಟಿಆರ್ ಭರೋಸಾ’ ಹೆಸರಿನ ಯೋಜನೆಗೆ ‘ವೈಎಸ್ಸಾರ್ ಪೆನ್ಷನ್ ಕಾಣುಕಾ’ ಎಂದು ಮರುನಾಮಕರಣ ಮಾಡಿದ್ದರು. ಬಳಿಕ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ‘ವೈಎಸ್ಸಾರ್ ಅಕ್ಷಯ ಪಾತ್ರ’ ಎಂದು ನಾಮಕರಣ ಮಾಡಿದ್ದಾರೆ. ಅಗ್ಗದ ದರದಲ್ಲಿ ಆಹಾರ ಒದಗಿಸಲು ಚಂದ್ರಬಾಬು ನಾಯ್ಡು ‘ಅಣ್ಣಾ ಎನ್‌ಟಿಆರ್ ಕ್ಯಾಂಟೀನ್’ ಆರಂಭಿಸಿದ್ದರು. ಎನ್‌ಟಿಆರ್ ಅವರನ್ನು ಜನರು ಅಣ್ಣಾ ಎಂದು ಕರೆಯುತ್ತಿದ್ದ ಹಿನ್ನೆಲೆಯಲ್ಲಿ ಆ ಹೆಸರನ್ನು ಇಡಲಾಗಿತ್ತು. 

ಇದೀಗ ಗುಂಟೂರು ಜಿಲ್ಲೆಯ ಅಣ್ಣಾ ಎನ್‌ಟಿಆರ್ ಕ್ಯಾಂಟೀನ್ ಹೆಸರನ್ನು ‘ರಾಜಣ್ಣ ಕ್ಯಾಂಟೀನ್’ ಎಂದು ಬದಲಿಸಲಾಗಿದೆ. ವೈಎಸ್ಸಾರ್ ಅವರನ್ನು ಅವರ ಬೆಂಬಲಿಗರು ರಾಜಣ್ಣ ಎಂದು ಕರೆಯುತ್ತಿದ್ದದ್ದು ಇದಕ್ಕೆ ಕಾರಣ.