ಹುಬ್ಬಳ್ಳಿ, (ಜೂ.24): ಮೈತ್ರಿ ಪಕ್ಷಗಳು ತಮ್ಮ-ತಮ್ಮ ಕಚ್ಚಾಟದಲ್ಲಿ ಮೈ ಮರೆತಿದ್ದಾರೆ. ಇದನ್ನು ಮರೆ ಮಾಚಲು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

ಇಂದು (ಸೋಮವಾರ) ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್,  ಅವರ ಮಾತಲ್ಲಿ ಸತ್ಯ ಇದೆ. ಅವರೊಬ್ಬ ಅನುಭವಿ ರಾಜಕಾರಣಿಯಾಗಿದ್ದು, ಅವರಿಗೆ ಈ ಸರ್ಕಾರದ ಮೇಲೆ ನಂಬಿಕೆ ಹೋಗಿದೆ. ಹೀಗಾಗಿ ಮೊದಲು ಈ ಸರ್ಕಾರವನ್ನು ವಿಸರ್ಜನೆ ಮಾಡಲಿ ಎಂದರು.

ಮಧ್ಯಂತರ ಎಲೆಕ್ಷನ್ ಪ್ರಸ್ತಾಪಿಸಿದ ದೇವೇಗೌಡ್ರು: ಚುನಾವಣೆ ಯಾವಾಗ.?

ಇದೇ ವೇಳೆ ಸಿಎಂ ಗ್ರಾಮ ವಾಸ್ತವ್ಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಸ್ಥಿತಿ ನಿರ್ಮಾಣ ಆಗಿದೆ. ಯಾವ ಪುರುಷಾರ್ಥಕ್ಕೆ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದಾರ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಎಷ್ಟು ದಿನ ಸಾಧ್ಯವೋ ಅಷ್ಟು ದಿನ ರಾಜ್ಯವನ್ನು ಮೈತ್ರಿ ಪಕ್ಷಗಳು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.