ಶಿರಾ [ಜು.22]: ಬಿಜೆಪಿ ನನ್ನನ್ನೂ ಖರೀದಿ ಮಾಡಲು ಯೋಜನೆ ಹಾಕಿಕೊಂಡಿತ್ತು ಎಂದು ಆರೋಪಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಜೆಡಿಎಸ್‌ ಶಾಸಕ ಬಿ.ಸತ್ಯನಾರಾಯಣ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕಡೆಗೆ ಬೊಟ್ಟು ಮಾಡಿದ್ದಾರೆ.

ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಕರೆ ಮಾಡಿದ್ದ ಜಗದೀಶ್‌ ಶೆಟ್ಟರ್‌, ಜೆಡಿಎಸ್‌ ಪಕ್ಷದಲ್ಲಿ ಹಿರಿಯರಾಗಿರುವ ನಿಮ್ಮನ್ನು ಪಕ್ಷ ಕಡೆಗಣಿಸಿದೆ. ಪಕ್ಷ ಬಿಟ್ಟು ಬನ್ನಿ ನಿಮಗೆ ಮಂತ್ರಿ ಸ್ಥಾನ ನೀಡಿ ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ.

ಚುನಾವಣೆಗೆ ನಿಮಗೆ ಇಲ್ಲ ನಿಮ್ಮ ಮಗನಿಗೆ ಪಕ್ಷದಿಂದ ಟಿಕೆಟ್‌ ನೀಡಿ ಚುನಾವಣೆ ಖರ್ಚುಗಳನ್ನು ಭರಿಸುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಜೆಡಿಎಸ್‌ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.