ಕೇವಲ 26 ಫೇಸ್ ಬುಕ್ ಸ್ನೇಹಿತರು ಮಾತ್ರ ನೋಡಲು ಸಾಧ್ಯ ಎಂಬ ಸಂದೇಶ ಹರಿದಾಡುತ್ತಿದೆ ವಾಸ್ತವ ಏನೆಂದು ಹುಡುಕಲು ಹೊರಟಾಗ ಇದೊಂದು ಫೇಕ್ ಸುದ್ದಿ ಎಂದು ಗೊತ್ತಾಗಿದೆ

ಜಗತ್ತಿನ ಅತಿ ಹೆಚ್ಚು ಜನರು ಬಳಸುವ ಸೋಷಿಯಲ್ ಮೀಡಿಯಾ ಫೇಸ್‌ಬುಕ್ ಬಗ್ಗೆಆಗಾಗ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ‘ನಿಮ್ಮ ಫೇಸ್‌ಬುಕ್ ಖಾತೆಯ ನ್ಯೂಸ್‌ಫೀಡ್ ಪೋಸ್ಟ್‌ಗಳನ್ನು ಕೇವಲ 26 ಫೇಸ್ ಬುಕ್ ಸ್ನೇಹಿತರು ಮಾತ್ರ ನೋಡಲು ಸಾಧ್ಯ.

ನೀವು ಫೇಸ್‌ಬುಕ್‌ನಲ್ಲಿ ನ್ಯೂಸ್‌ಫೀಡನ್ನು ಪೋಸ್ಟ್ ಮಾಡಿದ ಬಳಿಕ ಸ್ನೇಹಿತರನ್ನು ಆಯ್ಕೆ ಮಾಡುವಂತೆ ಹೇಳಲಾಗುತ್ತದೆ. ಅದರಲ್ಲಿ ಕೇವಲ 26 ಸ್ನೇಹಿತರನ್ನು ಆಯ್ಕೆ ಮಾಡಲು ಮಾತ್ರ ಅವಕಾಶವಿರುತ್ತದೆ. ಈ ಸಂದೇಶವನ್ನು ನೀವು ಓದುತ್ತಿದ್ದಲ್ಲಿ ಏನನ್ನಾದರೂ ಕಾಮೆಂಟ್ ಬಾಕ್ಸ್‌ನಲ್ಲಿ ಬರೆಯಿರಿ. ಮರೆಯದೆ ಈ ಸಂದೇಶವನ್ನು ಕಾಪಿ ಮಾಡಿ ನಿಮ್ಮ ಫೇಸ್‌ಬುಕ್ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಿ’ ಎಂದು ಬರೆಯಲಾಗಿದೆ.

ಸದ್ಯ ಈ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬರ ಪೋಸ್ಟ್ ಗಳನ್ನು ಕೇವಲ 26 ಫೇಸ್‌ಬುಕ್ ಸ್ನೇಹಿತರು ಮಾತ್ರ ನೋಡಲು ಸಾಧ್ಯವೇ ಎಂದು ಹುಡುಕ ಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ವಾಸ್ತವವಾಗಿ ಫೇಸ್‌ಬುಕ್ ಯಾವುದೇ ಮಿತಿಯನ್ನೂ ಹೇರಿಲ್ಲ. ಆದರೆ ಕಳೆದ ವರ್ಷ ಸ್ನೇಹಿತರ ನ್ಯೂಸ್‌ಫೀಡ್‌ಗಳನ್ನು ನೋಡುವ ಸಮಯಾವಕಾಶವನ್ನು ಕಡಿತಗೊಳಿಸಿದೆ ಹಾಗೂ ಸ್ನೇಹಿತರ ಸಂಖ್ಯೆಯನ್ನು ಅಧಿಕಗೊಳಿಸಿದೆ.

ಫೇಸ್ ಬುಕ್‌ನಲ್ಲಿ ‘ನೀವು ಮಾತ್ರ’, ‘ನಿಮ್ಮ ಸ್ನೇಹಿತರು ಮಾತ್ರ’ ಅಥವಾ ‘ಪಬ್ಲಿಕ್’ನೊಂದಿಗೆ ನಿಮ್ಮ ಪೋಸ್ಟ್ ಗಳನ್ನು ಹಂಚಿಕೊಳ್ಳಬಹುದು ಎಂಬ ಆಯ್ಕೆಗಳಿವೆ. ನಿಮ್ಮ ಆಯ್ಕೆಯಂತೆ ನಿಮ್ಮ ಪೋಸ್ಟ್ ಗಳನ್ನು ಇತರರು ನೋಡಬಹುದು. ಆದರೆ ಫೇಸ್ ಬುಕ್ ನ್ಯೂಸ್‌ಫೀಡ್ ಪೋಸ್ಟ್‌ಗಳನ್ನು ಕೇವಲ 26 ಜನ ಮಾತ್ರ ನೋಡುವಂತೆ ಮಿತಿ ಹೇರಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ವೈರಲ್ ಮಾಡಲಾಗಿದೆ. 

(ವೈರಲ್ ಚೆಕ್ ಅಂಕಣ)