ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಸೇರಿ ಕಾಂಗ್ರೆಸ್ ನಾಯಕರ ಮನೆ ಹಾಗೂ ಕಚೇರಿಗಳು ಆದಾಯ ತೆರಿಗೆ ಅಧಿಕಾರಿಗಳ ಸುಪರ್ದಿಯಲ್ಲಿದ್ದು, ಆಸ್ತಿ ದಾಖಲೆಗಳ ಪರಿಶೀಲನಾ ಕಾರ್ಯ 2 ನೇ ದಿನವಾದ ಶುಕ್ರವಾರವೂ ಮುಂದುವರಿದಿದೆ.

ಬೆಳಗಾವಿ (ಜ.20): ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಸೇರಿ ಕಾಂಗ್ರೆಸ್ ನಾಯಕರ ಮನೆ ಹಾಗೂ ಕಚೇರಿಗಳು ಆದಾಯ ತೆರಿಗೆ ಅಧಿಕಾರಿಗಳ ಸುಪರ್ದಿಯಲ್ಲಿದ್ದು, ಆಸ್ತಿ ದಾಖಲೆಗಳ ಪರಿಶೀಲನಾ ಕಾರ್ಯ 2 ನೇ ದಿನವಾದ ಶುಕ್ರವಾರವೂ ಮುಂದುವರಿದಿದೆ.

ಐಟಿ ಅಧಿಕಾರಿಗಳ ದಾಳಿಯ ಶಾಕ್‌ಗೆ ಒಳಗಾಗಿ ಗುರುವಾರ ರಾತ್ರಿಯೇ ಬೆಳಗಾವಿಗೆ ಲಕ್ಷ್ಮೀ ಹೆಬ್ಬಾಳಕರ್ ಆಗಮಿಸಿದ್ದರು. ಆದರೆ, ಐಟಿ ಅಧಿಕಾರಿಗಳು ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದರಿಂದ ಹೆಬ್ಬಾಳಕರ್ ಸೇರಿ ಅವರ ಕುಟುಂಬದ ಯಾರಿಗೂ ಪ್ರವೇಶ ನೀಡಲಿಲ್ಲ. ಸಚಿವ ರಮೇಶ ಜಾರಕಿಹೊಳಿ ಕೂಡ ತಮ್ಮ ಗೋಕಾಕ್‌ನ ಮನೆಗೆ ತೆರಳಿದ್ದು, ಐಟಿ ದಾಳಿ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಚಾರ್ಟರ್ಡ್ ಅಕೌಂಟಂಟ್ ಮೂಲಕ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.

ಉದ್ಯಮಿ ಲಖನ್ ಜಾರಕಿಹೊಳಿ ಅವರನ್ನು ಮನೆಯಿಂದ ಹೊರಗೆ ಬಿಡದ ಅಧಿಕಾರಿಗಳು ಸ್ಥಿರಾಸ್ತಿ, ಚರಾಸ್ತಿ ಹಾಗೂ ಬೇನಾಮಿ ಆಸ್ತಿ ಕುರಿತ ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದಾರೆ. ಅಲ್ಲದೇ, ಸಚಿವರ ಅಳಿಯ ಅಂಬಿರಾವ್ ಪಾಟೀಲ, ಆಪ್ತರಾದ ಅಲಿ ಅತ್ತಾರ ಹಾಗೂ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವೀದ್ ಮುಲ್ಲಾ ಅವರ ಮನೆಗಳಲ್ಲೂ ದಾಖಲೆ ಪರಿಶೀಲನೆ ಮುಂದುವರಿದಿದೆ.