ಬೆಂಗಳೂರು(ಆ.2): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ಉನ್ನತ ವರ್ಗದ ಯುವಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆಯಾ ಎಂಬ ಅನುಮಾನ ಕಾಡತೊಡಗಿದೆ. ಜಾತಿವಾರು ಹಾಸ್ಟೆಲ್ ಗಳನ್ನು ವಿರೋಧಿಸಿ ಡಿಸಿಎಂ ಡಾ.ಜಿ. ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.

ಜಾತಿವಾರು ಹಾಸ್ಟೆಲ್ ಬದಲು ಸಾಮಾನ್ಯ ವಸತಿಗೃಹಗಳನ್ನು ನಿರ್ಮಿಸಿ ಎಲ್ಲಾ ವಿಧ್ಯಾರ್ಥಿಗಳು ಒಟ್ಟಿಗೆ ಇರುವಂತೆ ನೋಡಿಕೊಳ್ಳಬೇಕು ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ. ಇದು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಿಂದ ಪೆಟ್ಟುತಿಂದ ಬಳಿಕ, ಜಾತಿ ವಿಚಾರವಾಗಿ ಕೈ ಪಾಳೆಯ ಎಚ್ಚೆತ್ತುಕೊಳ್ಳುತ್ತಿರುವ ಸಂಕೇತ ಎಂದು ಹೇಳಲಾಗುತ್ತಿದೆ.

ಅಹಿಂದ ವರ್ಗಕ್ಕೆ ತಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಿದ್ದ ಕಾಂಗ್ರೆಸ್, ಇದೀಗ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮೇಲ್ವರ್ಗದ ಯುವಕರನ್ನು ಸೆಳೆಯಲು ತಂತ್ರ ಹೂಡಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದು, ಜಾತಿ, ಧರ್ಮಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ರಾಜದ್ರೋಹದ ಕೆಲಸ ಎಂದು ಹೇಳಿದ್ದಾರೆ.

ಆದರೆ ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಡಿಸಿಎಂ ಪರಮೇಶ್ವರ್, ಆಗ ಏಕೆ ಈ ಕುರಿತು ಪ್ರಸ್ತಾಪ ಮಾಡಲಿಲ್ಲ ಎಂದು ಕೆಲಚರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತಿ ಆಧಾರದ ಮೇಲೆ ಹಾಸ್ಟೆಲ್ ನಿರ್ಮಾಣ ಬೇಡ ಎಂಬುದು ಪರಮೇಶ್ವರ್ ಅಂಬೋಣ. ಆದರೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜ್ಞಾನೋದಯವಾದುದರ ಕುರಿತು ಕಾಂಗ್ರೆಸ್ ಪಕ್ಷವೇ ಉತ್ತರಿಸಬೇಕು.