ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಸೀಸ್ ಚಟುವಟಿಕೆ ನಡೆಯುತ್ತಿದೆ ಎಂಬ ಸಾರಾಂಶವುಳ್ಳ ಆಡಿಯೋ ಕರಾವಳಿಯ ಶಾಂತಿಪ್ರಿಯರ ನೆಮ್ಮದಿ ಕೆಡಿಸಿದೆ. ಪೊಲೀಸ್ ಇಲಾಖೆ ಕೂಡಾ ಈ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದೆ. ಈ ನಡುವೆ ವೈರಲ್ ಆಡಿಯೋ ಮೂಲಕ ಭಯೋತ್ಪಾದಕ ಚಟುವಟಿಕೆಯ ಸುಳಿವು ನೀಡಿದ ಇಸ್ಮಾಯಿಲ್ ಶಾಫಿ ಅವರನ್ನು ಸಲಾಫಿ ಸಂಘಟನೆಯ ವಕ್ತಾರ ಹುದ್ದೆಯಿಂದ ವಜಾ ಮಾಡಲಾಗಿದೆ.
ಬೆಂಗಳೂರು (ಅ.06): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಸೀಸ್ ಚಟುವಟಿಕೆ ನಡೆಯುತ್ತಿದೆ ಎಂಬ ಸಾರಾಂಶವುಳ್ಳ ಆಡಿಯೋ ಕರಾವಳಿಯ ಶಾಂತಿಪ್ರಿಯರ ನೆಮ್ಮದಿ ಕೆಡಿಸಿದೆ. ಪೊಲೀಸ್ ಇಲಾಖೆ ಕೂಡಾ ಈ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದೆ. ಈ ನಡುವೆ ವೈರಲ್ ಆಡಿಯೋ ಮೂಲಕ ಭಯೋತ್ಪಾದಕ ಚಟುವಟಿಕೆಯ ಸುಳಿವು ನೀಡಿದ ಇಸ್ಮಾಯಿಲ್ ಶಾಫಿ ಅವರನ್ನು ಸಲಾಫಿ ಸಂಘಟನೆಯ ವಕ್ತಾರ ಹುದ್ದೆಯಿಂದ ವಜಾ ಮಾಡಲಾಗಿದೆ.
ಕೇರಳದಲ್ಲಿ ಸೆರೆ ಸಿಕ್ಕ ಉಗ್ರರ ಜೀವನಕ್ರಮಕ್ಕೂ, ದಕ್ಷಿಣ ಕನ್ನಡ ಜಿಲ್ಲೆಯ ಸಲಾಫಿ ಯುವಕರ ಇತ್ತೀಚಿನ ವರ್ತನೆಗೂ ಸಾಮತ್ಯೆ ಕಂಡು ನಾನು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ ಎಂದು ಇಸ್ಮಾಯಿಲ್ ಶಾಫಿ ಪುನರುಚ್ಛರಿಸಿದ್ದಾರೆ. ವಾಟ್ಸ್ ಅಪ್ ನಲ್ಲಿ ಶಾಫೀ ಅವರು ಮಾತನಾಡಿದ್ದ ಆಡಿಯೋವನ್ನು ಸುವರ್ಣ ನ್ಯೂಸ್ ನಾಡಿನ ಜನತೆಯ ಮುಂದಿಟ್ಟ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಪ್ರಿಯ ಜನರು ದಿಗ್ಬ್ರಮೆಗೊಂಡಿದ್ದಾರೆ. ಬಿಸಿರೋಡ್, ಮೂಡುಬಿದರೆ, ಕಾಟಿಪಳ್ಳ ಮುಂತಾದ ಮಸೀದಿಗಳಲ್ಲಿ ಕೆಲ ಯುವಕರ ವರ್ತನೆ ನನಗೆ ಆತಂಕ ಮೂಡಿಸಿತು. ಯಾರೊಂದಿಗೂ ಬೆರೆಯದ, ತಮ್ಮದೇ ರೀತಿಯ ಪೋಷಾಕು ತೊಟ್ಟು, ಕೇವಲ ತರಗತಿ ನಡೆಸುತ್ತಾ, ಅಲ್ಲಿಗೂ ಯಾರನ್ನೂ ಸೇರಿಸದೆ ಈ ಯುವಕರು ಆತಂಕ ಮೂಡಿಸಿದ್ದಾರೆ ಎಂದು ಶಾಫಿ ಮತ್ತೊಮ್ಮೆ ಹೇಳಿಕೆ ನೀಡಿರುವುದು ಸಂಶಯಗಳನ್ನು ಪುಷ್ಟೀಕರಿಸಿದೆ.
ಇಸ್ಮಾಯಿಲ್ ಶಾಫಿ ಅವರ ಆಡಿಯೋ ಪ್ರಸಾರವಾದ ನಂತರ ಮಂಗಳೂರು ಪೊಲೀಸರು ಈ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಶಾಫಿ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದಿದ್ದಾರೆ. ಅವರು ಬ್ಯಾರಿ ಬಾಷೆಯಲ್ಲಿ ಮಾತನಾಡಿರುವ ಆಡಿಯೋವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ವಿವರ ಸಂಗ್ರಹಿಸುತ್ತಿದ್ದಾರೆ. ಯಾವುದೇ ದೂರು ಬಂದಿಲ್ಲವಾದರೂ ಅಗತ್ಯಕ್ರಮ ಕೈಗೊಳ್ಳೋದಾಗಿ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
ಈ ನಡುವೆ ವೈರಲ್ ಆಡಿಯೋದ ಮೂಲಕ ಸಾಮಾಜಿಕ ಕಾಳಜಿ ತೋರಿದ ಇಸ್ಮಾಯಿಲ್ ಶಾಫಿ ಅವರನ್ನು ಸೌತ್ ಕೆಮರಾ ಸಲಾಫಿ ಮೂವ್ ಮೆಂಟ್ ಸಂಘಟನೆಯ ಮಾದ್ಯಮ ವಕ್ತಾರ ಹುದ್ದೆಯಿಂದ ವಜಾ ಮಾಡಲಾಗಿದೆ. ತಮ್ಮ ಗಮನಕ್ಕೆ ಬಾರದೇ ನೀಡಿರುವ ಹೇಳಿಕೆಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಮ್ಮ ಆದೇಶದ ಪ್ರತಿಯಲ್ಲಿ ಹೇಳಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ಬಗ್ಗೆ ಮಂಗಳೂರಿನ ಮುಸ್ಲೀಂ ಸಮುದಾಯ ದಿಗ್ಬ್ರಮೆ ವ್ಯಕ್ತಪಡಿಸಿದೆ. ಐಸೀಸ್ ಚಟುವಟಿಕೆ ಕಂಡು ಬಂದಿರೋದು ಆತಂಕಕಾರಿ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತಕ್ರಮ ಕೈಗೊಳ್ಳಬೇಕು. ಶಾಫಿ ಅವರಿಗೆ ಮೂರು ತಿಂಗಳ ಹಿಂದೆ ಮಾಹಿತಿ ಇದ್ದರೂ ಅವರು ಸುಮ್ಮನಿದ್ದದ್ದು ತಪ್ಪು ಎಂದು ಬೊಟ್ಟು ಮಾಡಿದ್ದಾರೆ. ಇದು ರಾಷ್ಟ್ರೀಯ ಭದ್ರತೆಯ ವಿಷಯ ಅನ್ನೋ ಕಾರಣಕ್ಕೆ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮಂಗಳೂರಿನಲ್ಲಿ ಎನ್ ಐ ಎ ಕಚೇರಿ ಆಗಬೇಕು ಎಂಬ ಒತ್ತಾಯ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಗಮನಸೆಳೆದಿದೆ.
