ಮತ್ತೊಂದು ಸಾಧನೆಗೆ ಇಸ್ರೋ ಸಿದ್ಧ!
ತಿರುನೆಲ್ವೇಲಿ (ಫೆ.19): ಮೊನ್ನೆಯಷ್ಟೇ ಏಕಕಾಲದಲ್ಲಿ ಒಂದೇ ರಾಕೆಟ್ ಮೂಲಕ 104 ಉಪಗ್ರಹ ಉಡಾವಣೆ ಮಾಡಿದ್ದ ಇಸ್ರೋ ಈಗ ಮತ್ತೊಂದು ಸಾಧನೆಗೆ ಸಜ್ಜಾಗಿದೆ.
ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕ್ರಯೋಜೆನಿಕ್ ಎಂಜಿನ್‌ನ ಕೊನೆಯ ಹಂತದ ಪರೀಕ್ಷೆಯನ್ನು ಇಸ್ರೊ ಯಶಸ್ವಿಯಾಗಿ ನಡೆಸಿದೆ.
ಏಪ್ರಿಲ್‌ನಲ್ಲಿ ಈ ಎಂಜಿನನ್ನು ಭೂಸ್ಥಿರ ಉಪಗ್ರಹ ಉಡಾವಣಾ ವಾಹನ ‘ಜಿಎಸ್‌ಎಲ್‌ವಿ - ಎಂಕೆ 3’ಗೆ ಅಳವಡಿಸಲಾಗುತ್ತದೆ. ಈ ರಾಕೆಟ್ 50 ಮೀಟರ್ ಎತ್ತರವಿದ್ದು, 415 ಟನ್ ತೂಕವಿರಲಿದೆ. ರಾಕೆಟ್ ಎಂಜಿನ್‌ಗಳಲ್ಲೇ ಕ್ರಯೋಜೆನಿಕ್ ಎಂಜಿನ್ ಅತ್ಯಂತ ಸಂಕೀರ್ಣವಾದ ತಂತ್ರಜ್ಞಾನ.
ಸದ್ಯ ರಷ್ಯಾ, ಅಮೆರಿಕ, ಫ್ರಾನ್ಸ್, ಚೀನಾ, ಜಪಾನ್ ಮತ್ತು ಭಾರತದ ಬಳಿ ಮಾತ್ರ ಈ ತಂತ್ರಜ್ಞಾನವಿದೆ.
