ಐಸಿಸ್ ಸಂಘಟನೆಗೆ ಉಗ್ರರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ನಾಸಿರ್ ಬಿನ್ ಯಾಫಿ ಚೌಸ್ ಎಂಬ ಮಹಾರಾಷ್ಟ್ರದ ಪರ್ಭಾನಿಯ ಯುವಕನ ಲ್ಯಾಪ್‌'ಟಾಪ್‌'ನಲ್ಲಿ ಈ ‘ಕಿಲ್ ಲಿಸ್ಟ್’ ಪತ್ತೆಯಾಗಿದೆ.

ನವದೆಹಲಿ(ಫೆ.09): ತನ್ನ ಸದಸ್ಯರು ಹಾಗೂ ಸಂಘಟನೆಗೆ ಹೊಸದಾಗಿ ಸೇರಲು ತುದಿಗಾಲಿನಲ್ಲಿ ನಿಂತಿರುವವರ ವಿವರವನ್ನು ಭದ್ರತಾ ಪಡೆಗಳಿಗೆ ಒದಗಿಸುತ್ತಿದ್ದ ಸದುದ್ದೇಶದ ಹ್ಯಾಕರ್‌'ಗಳು ಹಾಗೂ ಕಂಪ್ಯೂಟರ್ ವೃತ್ತಿಪರರನ್ನು ಕೊಲ್ಲಲು ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಚು ರೂಪಿಸಿತ್ತು. ಇದಕ್ಕಾಗಿ ‘ಕಿಲ್ ಲಿಸ್ಟ್’ (ಹತ್ಯೆ ಪಟ್ಟಿ) ಒಂದನ್ನೂ ಸಿದ್ಧಪಡಿಸಿತ್ತು ಎಂಬ ಕಳವಳಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಐಸಿಸ್ ತಯಾರಿಸಿದ್ದ ಪಟ್ಟಿ ಇದೀಗ ರಾಷ್ಟ್ರೀಯ ತನಿಖಾ ದಳ (ಎನ್‌'ಐಎ)ಕ್ಕೆ ಲಭ್ಯವಾಗಿದೆ. ಜಗತ್ತಿನ ವಿವಿಧೆಡೆಯ ಕಂಪ್ಯೂಟರ್ ವೃತ್ತಿಪರರ ಹೆಸರು, ವಿಳಾಸ ಅದರಲ್ಲಿದೆ. ಆ ಪೈಕಿ 150 ಮಂದಿ ಮಹಾರಾಷ್ಟ್ರದವರು. ಅದರಲ್ಲೂ 70 ಮಂದಿ ಮುಂಬೈನವರಾಗಿದ್ದಾರೆ.

ಈಗ ಪಟ್ಟಿಯನ್ನು ವಿಶ್ಲೇಷಿಸುತ್ತಿರುವ ಭದ್ರತಾ ಪಡೆಗಳು, ಪಟ್ಟಿಯಲ್ಲಿ ಹೆಸರು ಹೊಂದಿರುವ ಕೆಲವು ವ್ಯಕ್ತಿಗಳನ್ನು ಸಂಪರ್ಕಿಸಿವೆ. ಇದೇ ವೇಳೆ, ನೈಜ ಗುರಿಗಳನ್ನು ಮರೆಮಾಚಲು ಈ ಪಟ್ಟಿಯನ್ನು ಐಸಿಸ್ ಬಿಡುಗಡೆ ಮಾಡಿರಬಹುದು ಎಂಬ ಸಂದೇಹವೂ ವ್ಯಕ್ತವಾಗಿದೆ.

ಐಸಿಸ್ ಸಂಘಟನೆಗೆ ಉಗ್ರರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ನಾಸಿರ್ ಬಿನ್ ಯಾಫಿ ಚೌಸ್ ಎಂಬ ಮಹಾರಾಷ್ಟ್ರದ ಪರ್ಭಾನಿಯ ಯುವಕನ ಲ್ಯಾಪ್‌'ಟಾಪ್‌'ನಲ್ಲಿ ಈ ‘ಕಿಲ್ ಲಿಸ್ಟ್’ ಪತ್ತೆಯಾಗಿದೆ.

ಸಿರಿಯಾ ಮೂಲದ ನಿಯಂತ್ರಕ ಶಫಿ ಅರ್ಮಾರ್ ಅಲಿಯಾಸ್ ಯೂಸುಫ್ ಅಲಿಯಾಸ್ ಫಾರೂಕಿ ಇದನ್ನು ರವಾನಿಸಿದ್ದ ಎಂದು ಗೊತ್ತಾಗಿದೆ. ಭದ್ರತಾ ಪಡೆಗಳಿಗೆ ನೆರವಾಗುತ್ತಿರುವ ಕಂಪ್ಯೂಟರ್ ತಜ್ಞರ ಹೆಸರು, ಹುದ್ದೆ, ಕಂಪನಿ, ಇ-ಮೇಲ್ ವಿಳಾಸ ಕೂಡ ಪಟ್ಟಿಯಲ್ಲಿದೆ.