2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ 44 ಸ್ಥಾನ ಗೆಲ್ಲುವ ಮೂಲಕ ಇತಿಹಾಸದಲ್ಲೇ ಅತ್ಯಂತ ಕಳಪೆ ಸಾಧನೆ ಮಾಡಿದ್ದ ಕಾಂಗ್ರೆಸ್‌, 2019ರ ಲೋಕಸಭಾ ಚುನಾವಣೆಗೆ ಈಗಲೇ ಸಿದ್ಧತೆ ಆರಂಭಿಸಿದೆ. 

ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ 44 ಸ್ಥಾನ ಗೆಲ್ಲುವ ಮೂಲಕ ಇತಿಹಾಸದಲ್ಲೇ ಅತ್ಯಂತ ಕಳಪೆ ಸಾಧನೆ ಮಾಡಿದ್ದ ಕಾಂಗ್ರೆಸ್‌, 2019ರ ಲೋಕಸಭಾ ಚುನಾವಣೆಗೆ ಈಗಲೇ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಏ.29ರ ಭಾನುವಾರ ನವದೆಹಲಿಯಲ್ಲಿ ಜನಾಕ್ರೋಶ ರಾರ‍ಯಲಿ ಆಯೋಜಿಸಲಾಗಿದ್ದು, ಅದು 2019ರ ಲೋಕಸಭಾ ಚುನಾವಣೆಗೆ ಪಕ್ಷದ ರಣಕಹಳೆ ಮೊಳಗಿಸಲು ವೇದಿಕೆಯಾಗಲಿದೆ ಎನ್ನಲಾಗಿದೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆಯಲಿರುವ ‘ಜನಾಕ್ರೋಶ ರಾರ‍ಯಲಿ’ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚಾಲನೆ ನೀಡಲಿದ್ದು, ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಪಕ್ಷದ ಪ್ರಚಾರದ ದಿಕ್ಸೂಚಿ ಈ ರಾರ‍ಯಲಿ ಮೂಲಕ ಪ್ರದರ್ಶನವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ರಾರ‍ಯಲಿ, ಕೇವಲ ಮುಂದಿನ ಹೋರಾಟಕ್ಕೆ ಕೇವಲ ದಿಕ್ಸೂಚಿ ಮಾತ್ರ ಆಗಿರದು. ಬದಲಾಗಿ 2019ರ ಚುನಾವಣಾ ತಂತ್ರಗಾರಿಕೆಯ ಆರಂಭಿಕ ನೀಲ ನಕಾಶೆ ರಾಜ್ಯ ಘಟಕಗಳಿಗೆ ದೊರೆಯಲಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಂತಿಮ ಹಂತದಲ್ಲಿ ಆಗಬಹುದಾದ ಗೊಂದಲ ತಪ್ಪಿಸುವ ನಿಟ್ಟಿನಲ್ಲಿ ಮತ್ತು ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡುವ ನಿಟ್ಟಿನಲ್ಲಿ ಈಗಾಗಲೇ ಅಭ್ಯರ್ಥಿಗಳ ಆಯ್ಕೆಗೂ ಪಕ್ಷ ಚಾಲನೆ ನೀಡಿದೆ. ರಾಜ್ಯ ಸಮಿತಿಗಳು ಈಗಾಗಲೇ ಸೂಕ್ತ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿವೆ. ಮುಖ್ಯವಾಗಿ ಗೆಲ್ಲುವ ಸಾಮರ್ಥ್ಯದ ಅರ್ಹತೆಯಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿರಚಿಸುವಂತೆ ರಾಜ್ಯ ಸಮಿತಿಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎನ್ನಲಾಗಿದೆ.

ಭರ್ಜರಿ ರ್ಯಾಲಿ : ಭಾನುವಾರದ ದೆಹಲಿ ರಾರ‍ಯಲಿಯ ಬಳಿಕ ವಿವಿಧ ರಾಜ್ಯ ಘಟಕಗಳು ತಮ್ಮ ರಾಜ್ಯಗಳಲ್ಲಿ ಇದೇ ಮಾದರಿಯ ರಾರ‍ಯಲಿಗಳನ್ನು ನಡೆಸಲಿವೆ. ಮಧ್ಯಪ್ರದೇಶದಲ್ಲಿ ‘ನಯಾಯ್‌ ಯಾತ್ರೆ’, ಹರ್ಯಾಣದಲ್ಲಿ ‘ಜನ ಕ್ರಾಂತಿ ಯಾತ್ರೆ’ ನಡೆಯಲಿದೆ.

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಭಾನುವಾರದ ರಾರ‍ಯಲಿಯಲ್ಲಿ 2019ಕ್ಕೆ ಪಕ್ಷದ ತಂತ್ರಗಾರಿಕೆಯ ಬಗ್ಗೆ ಪಕ್ಷದ ಅಧ್ಯಕ್ಷರು ನಿರ್ದೇಶನ ನೀಡಲಿದ್ದಾರೆ ಎಂದು ಹರ್ಯಾಣ ಮಾಜಿ ಸಿಎಂ ಭೂಪೀಂದರ್‌ ಸಿಂಗ್‌ ಹೂಡಾ ಹೇಳಿದ್ದಾರೆ. ಪಕ್ಷದ ಅಧ್ಯಕ್ಷರ ಯಾತ್ರೆ ಮಾದರಿ ದೊಡ್ಡ ಯಶಸ್ಸು ಪಡೆದಿದೆ. ಇದರ ಮೂಲಕ ಕಾಂಗ್ರೆಸ್‌ ಮತ್ತು ಜನರ ನಡುವೆ ಮಾತ್ರವಲ್ಲ, ಪಕ್ಷದೊಳಗೂ ನಂಟನ್ನು ಬೆಸೆಯುತ್ತದೆ ಎಂದು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಬಿಜೆಪಿ ತಂತ್ರಕ್ಕೆ ಕೈ ಪ್ರತಿತಂತ್ರ: ಈಗಾಗಲೇ ದೇಶದ ಬಹುತೇಕ ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಬಿಜೆಪಿ, ಕೇರಳ, ಪಶ್ಚಿಮ ಬಂಗಾಳ, ಒಡಿಶಾಗಳನ್ನು ತನ್ನ ಮುಂದಿನ ಗುರಿಯಾಗಿಸಿಕೊಂಡಿದೆ. ಹೀಗಾಗಿ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್‌, ಬಿಜೆಪಿ ಆಡಳಿತದ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್‌ ಮತ್ತು ಮಹಾರಾಷ್ಟ್ರಗಳನ್ನು ತನ್ನ ಮುಖ್ಯ ಗುರಿಯಾಗಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ, ಸ್ಥಳೀಯ ಸಮಸ್ಯೆ ಹೈಲೈಟ್‌: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಳ್ಳಬೇಕು, ಅದಕ್ಕೆ ರಾಷ್ಟ್ರೀಯ ವಿಷಯಗಳನ್ನು ಸೇರಿಸಿಕೊಂಡು, ಬಿಜೆಪಿ ವಿರುದ್ಧ ಜನಾಂದೋಲನ ರೂಪಿಸಬೇಕು ಎಂದು ಪಕ್ಷದ ಹೈಕಮಾಂಡ್‌ ರಾಜ್ಯ ಘಟಕಗಳಿಗೆ ಸೂಚಿಸಿದೆ ಎನ್ನಲಾಗಿದೆ.